ADVERTISEMENT

13 ವರ್ಷದಿಂದ ಒಂದೇ ಮೂರ್ತಿ ಪ್ರತಿಷ್ಠಾಪನೆ

ಪಟಾಕಿ ಸಿಡಿಸಲ್ಲ, ಡಿ.ಜೆ ಬಳಸಲ್ಲ * ಬೆಳಗಾವಿಯಲ್ಲೊಂದು ‘ಪರಿಸರ ಸ್ನೇಹಿ’ ಗಣೇಶೋತ್ಸವ

ಇಮಾಮ್‌ಹುಸೇನ್‌ ಗೂಡುನವರ
Published 29 ಆಗಸ್ಟ್ 2025, 19:35 IST
Last Updated 29 ಆಗಸ್ಟ್ 2025, 19:35 IST
ಬೆಳಗಾವಿಯ ಟಿಳಕವಾಡಿಯ ಆರ್‌ಪಿಡಿ ಕ್ರಾಸ್‌ನ ಮಂಟಪದಲ್ಲಿ ಭಕ್ತರು ಗಣಪನ ದರ್ಶನ ಪಡೆದರು 
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಟಿಳಕವಾಡಿಯ ಆರ್‌ಪಿಡಿ ಕ್ರಾಸ್‌ನ ಮಂಟಪದಲ್ಲಿ ಭಕ್ತರು ಗಣಪನ ದರ್ಶನ ಪಡೆದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿ ವರ್ಷ ಆಕರ್ಷಕ ವಿನ್ಯಾಸದ ಗಣೇಶನ ಹೊಸ ಮೂರ್ತಿ ಪ್ರತಿಷ್ಠಾಪಿಸುವುದು ವಾಡಿಕೆ. ಆದರೆ, ಇಲ್ಲಿನ ಟಿಳಕವಾಡಿ ಆರ್‌ಪಿಡಿ ಕ್ರಾಸ್‌ನ ಮಹಾಗಣಪತಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು ಕಳೆದ 13 ವರ್ಷಗಳಿಂದ ಒಂದೇ ಮೂರ್ತಿ ಪ್ರತಿಷ್ಠಾಪಿಸುತ್ತಿದೆ.

ಸಾರ್ವಜನಿಕ ಮೂರ್ತಿಗಳ ವಿಸರ್ಜನೆ ನಡೆಯುವ 11ನೇ ದಿನ ಈ ಮೂರ್ತಿಯನ್ನು ವಿಸರ್ಜಿಸುವುದಿಲ್ಲ. ಬೃಹತ್‌ ಮೆರವಣಿಗೆ ಮಾಡುವುದಿಲ್ಲ. ಪಟಾಕಿ–ಸಿಡಿಮದ್ದುಗಳನ್ನು ಸಿಡಿಸುವುದಿಲ್ಲ. ಅಬ್ಬರದ ಧ್ವನಿವರ್ಧಕಗಳನ್ನೂ ಬಳಸುವುದಿಲ್ಲ. ಅಪ್ಪಟ ಪರಿಸರಸ್ನೇಹಿ ಹಬ್ಬ ಆಚರಿಸುತ್ತದೆ.

1959ರಲ್ಲಿ ಸ್ಥಾಪನೆಯಾದ ಮಂಡಳಿಯು ಆರಂಭದಲ್ಲಿ ಮಣ್ಣು ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ರೂಪಿಸಿದ ಮೂರ್ತಿಗಳನ್ನು ಸ್ಥಾಪಿಸುತಿತ್ತು. ಇದಕ್ಕೆ ₹50 ಸಾವಿರ ಖರ್ಚಾಗುತ್ತಿತ್ತು. ಮೂರ್ತಿ ವಿಸರ್ಜಿಸಿದಾಗ, ನೀರು ಕಲುಷಿತವಾಗುತ್ತಿತ್ತು. ಇದನ್ನು ತಪ್ಪಿಸಲು ಮಂಡಳಿಯವರು ಹೊಸ ಉಪಾಯ ಕಂಡುಕೊಂಡರು.

ADVERTISEMENT

‘ಪರಿಸರಕ್ಕೆ ಹಾನಿ ತಪ್ಪಿಸಲು 2013ರಲ್ಲಿ ₹ 1.11 ಲಕ್ಷ ವೆಚ್ಚದಲ್ಲಿ ಫೈಬರ್‌ನಲ್ಲಿ 13 ಅಡಿ ಎತ್ತರದ ಗಣೇಶನ ಮೂರ್ತಿ ತಯಾರಿಸಿದೆವು. ‍ಪ್ರತಿವರ್ಷ 11 ದಿನ ಈ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ನಂತರ ಅದನ್ನು ಕಂಟೇನರ್‌ನಲ್ಲಿ ವರ್ಷವಿಡೀ ಜೋಪಾನವಾಗಿ ಇಡಲಾಗುತ್ತದೆ. ಹಬ್ಬ ಸಮೀಪಿದಾಗ, ಬಣ್ಣ ಹಚ್ಚಿ ಸಿಂಗರಿಸಿ ಮತ್ತೆ ಪ್ರತಿಷ್ಠಾಪಿಸುತ್ತೇವೆ. ಜನರಿಗೆ ತೊಂದರೆ ಆಗದಿರಲಿ ಎಂದು ಸಾರ್ವಜನಿಕ ಮೂರ್ತಿಗಳ ವಿಸರ್ಜನೆ ದಿನ ಮೆರವಣಿಗೆ ಇರುವುದಿಲ್ಲ’ ಎಂದು ಮಂಡಳಿ ಮುಖ್ಯಸ್ಥ ಕಿರಣ ಸಾಯನಾಕ್‌ ತಿಳಿಸಿದರು.

‘ಫೈಬರ್‌ ಮೂರ್ತಿ ಎದುರು ಪೂಜೆಗೆಂದೇ ಮಣ್ಣಿನಲ್ಲಿ ಸಿದ್ಧವಾದ ಚಿಕ್ಕದಾದ ಮೂರ್ತಿಯನ್ನು ಇಡುತ್ತೇವೆ. ಅದನ್ನು ಮಾತ್ರವೇ ಮಂಡಳಿಗೆ ಸಮೀಪದಲ್ಲೇ ಇರುವ ಬಾವಿಯೊಂದರಲ್ಲಿ ವಿಸರ್ಜಿಸುತ್ತೇವೆ. ಈ ಮೂಲಕ ಸರಳ ಆಚರಣೆಗೆ ಆದ್ಯತೆ ನೀಡುತ್ತೇವೆ’ ಎಂದು ಅವರು ‘ಪ್ರಜಾವಾಣಿ’ ತಿಳಿಸಿದರು. 

ಕಿರಣ ಸಾಯನಾಕ್‌
ಫೈಬರ್‌ನಿಂದ ಸಿದ್ಧ ಪಡಿಸಿರುವ ಗಣೇಶನ ಮೂರ್ತಿ ಸುಸ್ಥಿತಿಯಲ್ಲಿದೆ. ಇನ್ನೂ ಹಲವು ವರ್ಷ ಇದನ್ನೇ ಪ್ರತಿಷ್ಠಾ‍ಪಿಸಿ ಪೂಜಿಸುತ್ತೇವೆ. ಕಿ
ರಣ ಸಾಯನಾಕ್‌ ಮುಖ್ಯಸ್ಥ ಮಹಾಗಣಪತಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಆರ್‌ಪಿಡಿ ಕ್ರಾಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.