ಚಿಕ್ಕೋಡಿ: ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ತಾಲ್ಲೂಕಿನ ವಿವಿಧೆಡೆ ಸಿದ್ಧತೆ ನಡೆದಿದ್ದು ಮೂರ್ತಿಗಳ ಮಾರಾಟ ಭರ್ಜರಿಯಾಗಿ ಸಾಗಿದೆ.
ಮಾರುಕಟ್ಟೆಯಲ್ಲಿ ಪಿಒಪಿ ಗಣೇಶ ಮೂರ್ತಿ, ಜೇಡಿಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳೂ ಇವೆ. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಹೆಚ್ಚಿನ ಜನರು ಜೇಡಿಮಣ್ಣಿನ ಗಣೇಶ ಮೂರ್ತಿಗೆ ಮೊರೆ ಹೋಗಿದ್ದು, ಕಂಡು ಬರುತ್ತಿದೆ. ಈಗಾಗಲೇ ಶೇ 90ರಷ್ಟು ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮುಂಗಡ ಹಣ ನೀಡಿ ಗ್ರಾಹಕರು ಕಾಯ್ದಿರಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ( ಪಿಒಪಿ ) ಗಣೇಶ ಮೂರ್ತಿಗಳ ತಯಾರಿ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಮಾರುಕಟ್ಟೆಯಲ್ಲಿ ಪಿಒಪಿಯಿಂದ ತಯಾರಿಸಿದ ಬೃಹತ್ ಗಾತ್ರದ ಗಣೇಶ ಮೂರ್ತಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ನಿಷೇಧದ ನಡುವೆಯೂ ಪಿಒಪಿ ಗಣೇಶನನ್ನು ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪನೆ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಶಾಲಾ ಕಾಲೇಜು, ಸರ್ಕಾರಿ ಕಚೇರಿ ಮುಂತಾದ ಕಡೆಗೆ ಜೇಡಿಮಣ್ಣಿನಿಂದ ತಯಾರಿದ ಗಣೇಶ ಮೂರ್ತಿಗಳನ್ನು ಕಾಯ್ದಿರಿಸಲಾಗಿದೆ. ಇನ್ನು ಕೆಲವು ಸಾರ್ವಜನಿಕ ಗಜಾನನ ಮಂಡಳಿಯವರು ಜೇಡಿಮಣ್ಣು, ನೈಸರ್ಗಿಕ ಬಣ್ಣಗಳಿಂದ ಶಾಸ್ತ್ರೋಕ್ತವಾಗಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿದ್ದಾರೆ.
ಪಟ್ಟಣದ ಪ್ರಭುವಾಡಿ, ಹಾಲಟ್ಟಿ, ಭಾಗ್ಯಲಕ್ಷ್ಮೀ ನಗರ, ಸೋಮವಾರಪೇಠೆ ಸೇರಿದಂತೆ 10ಕ್ಕೂ ಹೆಚ್ಚು ಕಡೆಗೆ 15ಕ್ಕೂ ಹೆಚ್ಚು ಮನೆತನದವರು ಗಣೇಶನ ಮೂರ್ತಿಗಳನ್ನು ತಯಾರಿಸುತ್ತಾರೆ. ಮಹಾರಾಷ್ಟ್ರದ ಗಡಹಿಂಗ್ಲಜ ತಾಲ್ಲೂಕಿನ ಖಡಗಾಂವ ಮೂಲದ 4 ಮನೆತನದವರು ಗಣಪತಿ ಮೂರ್ತಿ ತಯಾರಿಸಿ, ಚಿಕ್ಕೋಡಿ ಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ.
ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಗಳ ದರ ಹೆಚ್ಚಿದ್ದು, ಪಿಒಪಿ ಗಣೇಶನ ಮೂರ್ತಿಗಳ ದರ ಕಡಿಮೆ ಇದೆ. ಹೀಗಿದ್ದರೂ ಪರಿಸರ ಕಾಳಜಿ ಹಾಗೂ ಕಾನೂನು ಪಾಲನೆಯ ದೃಷ್ಟಿಯಿಂದ ಹೆಚ್ಚಿನ ಜನರು ಮಣ್ಣಿನ ಮೂರ್ತಿಗಳನ್ನು ಕಾಯ್ದಿರಿಸಿದ್ದಾರೆ.
₹2 ಸಾವಿರ ವೆಚ್ಚ ಮಾಡಿ 20 ಕೆಜಿ ಪಿಒಪಿಯಿಂದ 6 ಮೂರ್ತಿಗಳನ್ನು ತಯಾರಿಸಬಹುದು 1 ಟನ್ ಜೇಡಿಮಣ್ಣಿಗೆ ₹ 6 ಸಾವಿರ ವೆಚ್ಚವಾಗಲಿದ್ದು ಇದರಲ್ಲಿ 300 ಮೂರ್ತಿ ತಯಾರಿಸಲು ಸಾಧ್ಯಪ್ರಕಾಶ ಹರಿಕುಂಬಾರ, ಮೂರ್ತಿ ತಯಾರಕ
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಹೆಚ್ಚಿದ್ದು ಹೀಗಾಗಿ ಜೇಡಿಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದೇವೆರೂಪಾ ಇಟ್ನಾಳೆ, ನಾಗರಮುನ್ನೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.