
ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ ಹಾಗೂ ಕಾಗವಾಡ ವಲಯಗಳಲ್ಲಿ ಪೂರ್ಣಕಾಲಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳೇ(ಬಿಇಒ) ಇಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಗೆ ತೊಡಕಾಗುತ್ತಿದೆ!
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಂಟು ವಲಯಗಳಿವೆ. ಈ ಪೈಕಿ 2025ರ ಫೆಬ್ರುವರಿ 1ರಿಂದ ಚಿಕ್ಕೋಡಿ ಬಿಇಒ ಹಾಗೂ 2025ರ ಜುಲೈ 2ರಿಂದ ಕಾಗವಾಡ ಬಿಇಒ ಹುದ್ದೆ ಖಾಲಿ ಇವೆ.
ಪ್ರಭಾವತಿ ಪಾಟೀಲ ಹುಕ್ಕೇರಿ ಬಿಇಒ. ಅವರೇ ಚಿಕ್ಕೋಡಿ ಪ್ರಭಾರ ಬಿಇಒ ಆಗಿಯೂ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಚಿಕ್ಕೋಡಿ ಹಾಗೂ ಹುಕ್ಕೇರಿ ಎರಡೂ ತಾಲ್ಲೂಕುಗಳಲ್ಲಿ ಕೆಲಸ ಮಾಡುವುದು ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಕಡತಗಳ ವಿಲೇವಾರಿ, ಶಾಲಾ ಭೇಟಿ, ಶಿಕ್ಷಕರ ಸಭೆ ಮತ್ತಿತರ ಚಟುವಟಿಕೆ ಕೈಗೊಳ್ಳಲು ಕಷ್ಟವಾಗುತ್ತಿದೆ.
ಕಾಗವಾಡ ವಲಯದ ಕ್ಷೇತ್ರ ಸಮನ್ವಯಾಧಿಕಾರಿಯಾದ ಪಾಂಡುರಂಗ ಮಧಬಾವಿ ಅವರು, ಕಾಗವಾಡ ಬಿಇಒ ಹುದ್ದೆಯನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಒಬ್ಬರೇ ಅಧಿಕಾರಿಗೆ ಎರಡೂ ಹುದ್ದೆ ನಿಭಾಯಿಸುವುದು ಸಂಕಷ್ಟ ತಂದಿದೆ.
ಚಿಕ್ಕೋಡಿ ಡಯಟ್‌ನ ಪ್ರಾಚಾರ್ಯ ಹುದ್ದೆಯೂ 2025ರ ಜುಲೈ 14ರಿಂದ ಖಾಲಿ ಇದೆ. ಡಯಟ್ ಉಪನ್ಯಾಸಕ ಸಂಜು ಹುಲ್ಲೋಳ್ಳಿ ಅವರೇ ಪ್ರಾಚಾರ್ಯ ಹುದ್ದೆ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಇದರಿಂದ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸಕ್ಕೂ ತೊಂದರೆಯಾಗುತ್ತಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಭಾಗವಾದ ಚಿಕ್ಕೋಡಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹುದ್ದೆ ಸಹ 2024ರ ಆಗಸ್ಟ್ 16ರಿಂದ ಖಾಲಿ ಇದೆ. ಚಿಕ್ಕೋಡಿ ಡಯಟ್ ಉಪನ್ಯಾಸಕ ಕೆಂಪಣ್ಣ ತಳವಾರ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಬ್ಬರು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಬದಲಿಗೆ, ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳೇ ಖಾಲಿ ಇರುವುದರಿಂದ ಕಲಿಕಾ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರತ್ತಿದೆ. ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕುಟಿ.ಎಸ್.ಮೋರೆ ಸ್ಥಳೀಯ
ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆಆರ್.ಎಸ್.ಸೀತಾರಾಮು ಡಿಡಿಪಿಐ ಚಿಕ್ಕೋಡಿ