
ಚಿಕ್ಕೋಡಿ: ‘ಮರಾಢ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿದೆ. ದೇಶದಲ್ಲಿ ಅತ್ಯಂತ ಕಟ್ಟ ಕಡೆಯ ಸ್ಥಾನದಲ್ಲಿ ಮರಾಠಾ ಸಮುದಾಯವಿದ್ದು, ಇದನ್ನು ಮೇಲೆತ್ತಲು ಸಂಘಟನೆ ಅತ್ಯವಶ್ಯ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಪದ್ಮಾ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ತಾಲ್ಲೂಕು ಮರಾಠಾ ಸಮಾಜದವರ ಸಭೆಯಲ್ಲಿ ಮಾತನಾಡಿದ ಅವರು, ‘ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಇತಿಹಾಸವನ್ನು ತಿರುಚಿ ಮರಾಠ ಸಮಾಜದ ಯುವಕರ ದಾರಿ ತಪ್ಪಿಸುವವರ ಮಾತನ್ನು ನಂಬಬೇಡಿ. ರಾಜಕೀಯದಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ. ಸಮಾಜ ಸೇವೆಯೇ ತನ್ನ ಮೊದಲ ಆದ್ಯತೆಯಾಗಿದೆ’ ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ‘ಮರಾಠ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದ ಬದುಕಬೇಕಿದೆ’ ಎಂದು ಹೇಳಿದರು.
ಮಾಜಿ ಶಾಸಕ ಅಜೀತ ನಿಂಬಾಳಕರ, ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್, ಮುಖಂಡರಾದ ಬಿ.ಆರ್. ಯಾದವ, ರಾಮಾ ಮಾನೆ, ಅನಿಲ ಮಾನೆ, ಬಾಳಸಾಹೇಬ ಪಾಟೀಲ, ಸುಪ್ರಿಯಾ ದೇಸಾಯಿ, ಟಿ ಎಸ್ ಮೋರೆ, ಕಾಶಿನಾಥ ಸುಳಕುಡೆ, ಕಿಶೋರ ಪವಾರ, ಜ್ಯೋತಿಬಾ ಕಾಮಕರ, ರಂಜೀತ ಶಿರಶೇಟ, ಅನಿಲ ಪಾಟೀಲ, ಅಣ್ಣಾ ಪವಾರ, ಅಪ್ಪಾಸಾಹೇಬ ಪವಾರ, ಪಾಂಡುರಂಗ ಮಾನೆ, ಅಮರ ಯಾದವ ಇತರರು ಇದ್ದರು.