ADVERTISEMENT

ಆನೆಗೆ ಪಟ್ಟು: ಜಿಯೊ ಸಿಮ್‌ ಎಸೆದು ಪ್ರತಿಭಟನೆ

ನಾಂದಣಿ ಮಠದ ಆನೆಗಾಗಿ ಒಗ್ಗೂಡಿದ ಕರ್ನಾಟಕ–ಮಹಾರಾಷ್ಟ್ರದ ಗಡಿ ಭಾಗದ ಭಕ್ತರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 22:42 IST
Last Updated 5 ಆಗಸ್ಟ್ 2025, 22:42 IST
ನಾಂದಣಿ ಜೈನ ಮಠದ ಆನೆ ಮಹಾದೇವಿ (ಮಾಧುರಿ)
ನಾಂದಣಿ ಜೈನ ಮಠದ ಆನೆ ಮಹಾದೇವಿ (ಮಾಧುರಿ)   

ಕಾಗವಾಡ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ನಾಂದಣಿ ಮಠದಲ್ಲಿದ್ದ ಆನೆಯನ್ನು ಮರಳಿ ಮಠಕ್ಕೇ ಒಪ್ಪಿಸುವಂತೆ  ಭಕ್ತರು ಪಟ್ಟು ಹಿಡಿದಿದ್ದಾರೆ.

ಆನೆ ಒಯ್ಯಲು ಕಾರಣರಾಗಿದ್ದಾರೆ ಎಂದು ಸಿಟ್ಟಿಗೆದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ಅಸಂಖ್ಯ ಭಕ್ತರು ಅಂಬಾನಿ ಒಡೆತನದ ಜಿಯೊ ಸಿಮ್‌ಕಾರ್ಡ್‌ ಕಿತ್ತೆಸೆದಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿಯ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾಚಾರ್ಯ ಜೈನ ಮಠದ ಮಹಾದೇವಿ (ಮಾಧುರಿ) ಎಂಬ ಆನೆಯನ್ನು ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಗುಜರಾತ್‌ ರಾಜ್ಯದ ವನತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ (ಅಂಬಾನಿ ಒಡೆತನ) ಕರೆದೊಯ್ಯುಲಾಗಿದೆ. ಇದನ್ನು ಖಂಡಿಸಿದ ಭಕ್ತರು, ಭಾನುವಾರ (ಆ.3) ನಾಂದಣಿಯಿಂದ ಕೊಲ್ಹಾಪುರ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ADVERTISEMENT

30 ವರ್ಷಗಳಿಂದ ಆನೆ ಮಠದಲ್ಲಿತ್ತು. ಈಗ ಅದಕ್ಕೆ 35 ವರ್ಷ ವಯಸ್ಸು. ಮಠದಲ್ಲಿ ಪರಂಪರಾಗತವಾಗಿ ಆನೆ ಸಾಕುವ ‍ಪದ್ಧತಿ ಇದೆ. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರದ ಪ್ರಾಣಿ ದಯಾ ಸಂಘಟನೆ ದೂರು ಸಲ್ಲಿಸಿತ್ತು. ಅರಣ್ಯ ಇಲಾಖೆ ವೈದ್ಯಾಧಿಕಾರಿಗಳು ಆನೆ ಆರೋಗ್ಯ ತಪಾಸಣೆ ನಡೆಸಿ, ಸರಿಯಾದ ಪಾಲನೆ ಆಗದೆ ಆರೋಗ್ಯ ಕ್ಷೀಣಿಸಿದೆ ಎಂದು ವರದಿ ನೀಡಿದ್ದರು.

ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್‌ ಆನೆಯನ್ನು ಅರಣ್ಯಕ್ಕೆ ಬಿಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಠದ ಭಕ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಅಲ್ಲಿಯೂ ಸೋಲಾಯಿತು. ಆದೇಶದಂತೆ, ಜುಲೈ 28ರಂದು ಅರಣ್ಯಾಧಿಕಾರಿಗಳು ಆನೆಯನ್ನು ವಶಕ್ಕೆ ಪಡೆದು, ವನತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸೇರಿಸಿದ್ದಾರೆ.

‘ಜೈನ ಮಠಗಳ ಅಸ್ತಿತ್ವಕ್ಕೆ ಧಕ್ಕೆ ತರಲಾಗಿದೆ. ಉದ್ಯಮಿ ಅಂಬಾನಿ ಒಡೆತನದ ಕೇಂದ್ರಕ್ಕೆ ಆನೆಯನ್ನು ಸೇರಿಸಿದ್ದು ಸರಿಯಲ್ಲ ಎಂದು ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇದೇ ಕಾರಣಕ್ಕೆ ಅಪಾರ ಸಂಖ್ಯೆಯ ಭಕ್ತರು ಜಿಯೊ ನೆಟವರ್ಕ್‌ ಬಳಕೆಯನ್ನೂ ಕೈಬಿಟ್ಟಿದ್ದಾರೆ’ ಎಂದು ಜೈನ ಸಮಾಜದ ಮುಖಂಡರು ತಿಳಿಸಿದ್ದಾರೆ.

ಮಹಾರಾಷ್ಟ್ರದ ನಾಂದಣಿಯ ಜೈನ ಮಠದ ಆನೆ ಮರಳಿಸುವಂತೆ ಆಗ್ರಹಿಸಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯ ಭಕ್ತರು ಈಚೆಗೆ ಕೊಲ್ಹಾಪುರದವರೆಗೆ ಪಾದಯಾತ್ರೆ ನಡೆಸಿದರು
ಆನೆಯನ್ನು ಕರೆದೊಯ್ದ ಕಾರಣ ಜೈನ ಮುನಿಗಳೂ ಸೇರಿ ಇಡೀ ಊರು ಕಣ್ಣೀರು ಹಾಕುತ್ತಿದೆ. ಇದು ಭಾವನಾತ್ಮಕ ವಿಷಯ. ಸರ್ಕಾರ ಆನೆಯನ್ನು ಮಠಕ್ಕೆ ಮರಳಿಸಬೇಕು
ಸಂಜಯ ಕೂಚನೂರೆ ಉಪಾಧ್ಯಕ್ಷ ಬೆಳಗಾವಿ ದಿಗಂಬರ ಜೈನ ಬೋರ್ಡಿಂಗ್ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.