ADVERTISEMENT

ಖಾನಾಪುರ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:20 IST
Last Updated 26 ಮಾರ್ಚ್ 2024, 14:20 IST
ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೀಶ್ವರ ಬನ್ನೂರ (ಎಡದಿಂದ ಮೊದಲನೇಯವರು)
ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೀಶ್ವರ ಬನ್ನೂರ (ಎಡದಿಂದ ಮೊದಲನೇಯವರು)   

ಖಾನಾಪುರ: ಸ್ಥಳೀಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರದುಂಡೇಶ್ವರ ಮಹಾದೇವ ಬನ್ನೂರ ಮಂಗಳವಾರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮನರೇಗಾ ಕಾಮಗಾರಿಗೆ ತಾಂತ್ರಿಕ ಅನುಮೋದನೆ ನೀಡಲು ತಮ್ಮ ಕಚೇರಿಯಲ್ಲೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರಿಂದ ₹10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಖಾನಾಪುರ ತಾಲ್ಲೂಕಿನ ನೀಲಾವಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ವಾರ್ಡಿನಲ್ಲಿ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತಾಂತ್ರಿಕ ಅನುಮೋದನೆ ನೀಡುವಂತೆ ಕೋರಿ ಗ್ರಾಮ ಪಂಚಾಯ್ತಿಯಿಂದ ಆನ್-ಲೈನ್ ಮೂಲಕ ಪ್ರಸ್ತಾವ ಸಲ್ಲಿಸಲಾಗಿತ್ತು.

ADVERTISEMENT

ಬನ್ನೂರ ಅವರು ನೀಲಾವಡೆ ಗ್ರಾಮ ಪಂಚಾಯ್ತಿ ಸದಸ್ಯ ವಿನಾಯಕ ಮುತಗೇಕರ ಅವರ ಬಳಿ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವಿನಾಯಕ ಅವರು ವಿಷಯವನ್ನು ಬೆಳಗಾವಿಯ ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದರು.

ಆರೋಪಿಯನ್ನು ಲಂಚದ ಹಣದ ಸಮೇತ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಲೋಕಾಯುಕ್ತ ಎಸ್.ಪಿ. ಹಣುಮಂತರಾಯ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ ರೆಡ್ಡಿ, ಇನ್‌ಸ್ಪೆಕ್ಟರ್‌ಗಳಾದ ಉಸ್ಮಾನ ಅವಟಿ, ರವಿಕುಮಾರ ಧರ್ಮಟ್ಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.