ADVERTISEMENT

ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ: ಸಾರ್ವಜನಿಕರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 12:45 IST
Last Updated 26 ಮೇ 2019, 12:45 IST
ಸಂತೋಷ ಅರಳೀಕಟ್ಟಿ
ಸಂತೋಷ ಅರಳೀಕಟ್ಟಿ   

ಬೆಳಗಾವಿಯ ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸಿರುವ ಜಿಲ್ಲಾಡಳಿತದ ಕ್ರಮದ ಕುರಿತು ‘ಪ್ರಜಾವಾಣಿ’ಯು ಓದುಗರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. ಅವರಿಂದ ಬಂದ ಅಭಿಪ್ರಾಯಗಳು ಇಲ್ಲಿವೆ.

ವಾಪಸ್ ಪಡೆಯಬೇಕು
ಕೋಟೆ ಕೆರೆ ಆವರಣ ಪ್ರವೇಶಕ್ಕೆ ಶುಲ್ಕ ನಿಗದಿ ಮಾಡಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಜಿಲ್ಲಾಧಿಕಾರಿ ಈ ಆದೇಶವನ್ನು ಈ ಕೊಡಲೇ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
- ಪ್ರಶಾಂತ ಸಂತೋಷ ಅರಳಿಕಟ್ಟಿ, ಅಧ್ಯಕ್ಷ, ರಾಜ್ಯ ಯುವ ಘಟಕ, ಕರವೇ (ಸಂತೋಷ ಅರಳಿಕಟ್ಟಿ ಬಣ)

*
ಸಮಂಜಸವಾಗಿದೆ
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸುವುದು ಸಮಂಜಸವಾಗಿದೆ. ಕೆರೆ ನಮ್ಮೆಲ್ಲರ ಹೆಮ್ಮೆಯ ತಾಣ. ಅದರ ಅಂದ–ಚಂದ ವೃದ್ಧಿಸಲು ನಮ್ಮದೊಂದಿಷ್ಟು ಪಾಲು ಇರಬೇಕು. ಆಗ, ನಮಗೂ ಕಾಳಜಿ ಮುಡುತ್ತದೆ. ಎಲ್ಲವೂ ಉಚಿತವಾಗಿ ದೊರೆಯಬೇಕು ಎನ್ನುವ ಭಾವನೆ ಬಿಡಬೇಕು. ನಮಗಾಗಿ ಬೇಕಾದಷ್ಟು ಖರ್ಚು ಮಾಡುತ್ತೆವೆ. ಆದರೆ, ನಾಡಿನ ಅಭಿವೃದ್ಧಿ ವಿಷಯ ಬಂದಾಗ ಹಣವಿದ್ದರೂ ಬಡವರಂತೆ ವರ್ತಿಸುತ್ತೆವೆ. ಶುಲ್ಕ ವಿಧಿಸಿರುವುದು ತಪ್ಪಲ್ಲ. ಜಿಲ್ಲಾಡಳಿತದ ಕ್ರಮ ಸರಿಯಾಗಿದೆ. ಈ ಹಣವನ್ನು ಕೆರೆಯ ಅಭಿವೃದ್ಧಿಗೆ ಬಳಸಲಿ.
– ಸುರೇಶ ಚೌಗುಲೆ, ರಂಗಭೂಮಿ ಕಲಾವಿದ, ದಿಗ್ಗೇವಾಡಿ, ರಾಯಬಾಗ ತಾಲ್ಲೂಕು

ADVERTISEMENT

*
ಸೂಕ್ತವಾಗಿದೆ...
ಕೋಟೆ ಕೆರೆಗೆ ಅನವಶ್ಯಕ ವ್ಯಕ್ತಿಗಳು ಬಂದು ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದನ್ನ ತಡೆಯಲು ಹಾಗೂ ಅಲ್ಲಿನ ಸ್ವಚ್ಛತೆ ಕಾಪಾಡಲು ₹ 5 ಪ್ರವೇಶ ಶುಲ್ಕ ವಿದಿಸುವುದು ಸೂಕ್ತ. ಆದರೆ, ಬೆಳಗಿನ ವಾಯುವಿಹಾರಕ್ಕೆ ಬರುವವರಿಗೆ ಬೆಳಿಗ್ಗೆ 5ರಿಂದ 9ರವರೆಗೆ ಬೆಂಗಳೂರಿನ ಲಾಲ್‌ಬಾಗ್ ಮಾದರಿಯಲ್ಲಿ ಉಚಿತ ಪ್ರವೇಶ ಕೊಡಬೇಕು.
– ನಟರಾಜ್ ಹಸಂಜಗಿಮಠ್, ಬೆಳಗಾವಿ

*
ಸರಿಯಲ್ಲ...
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸುವುದು ಸರಿಯಲ್ಲ. ಸುತ್ತಲಿನ ಜನರು ಆಹ್ಲಾದಕರ ವಾತಾವರಣ ಮತ್ತು ನೆಮ್ಮದಿ ಅರಸಿ ಬರುವುದನ್ನು ಸಂಪನ್ಮೂಲ ಕ್ರೋಢೀಕರಣದ ನೆಪದಲ್ಲಿ ತಡೆಯಲು ಹೊರಟಿರುವುದು ಅಕ್ಷ್ಯಮ್ಯ. ಸಂಪನ್ಮೂಲಕ್ಕೆ ಬೇರೆ ದಾರಿ ಹುಡುಕಬೇಕು. ಮಹಾಂತೇಶ ನಗರ, ಆಂಜನೇಯ ನಗರ, ಶ್ರೀನಗರ, ಶಿವಾಜಿ ನಗರ, ವೀರಭದ್ರ ನಗರ, ಕೋಟೆ ಪ್ರದೇಶ ಮೊದಲಾದ ಕಡೆಗಳಿಂದ ವಾಯುವಿಹಾರಕ್ಕಾಗಿ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ಆಸ್ಪತ್ರೆಗಳಿಗೆ ಬರುವವರು ವಿಶ್ರಾಂತಿಗೆ, ಬುತ್ತಿ ತಿನ್ನಲು ಈ ಆವರಣ ಅವಲಂಬಿಸಿದ್ದಾರೆ. ಜನರ ಆರೋಗ್ಯ ವೃದ್ಧಿಸುವ, ವಿಶ್ರಾಂತಿಗಿರುವ ಸ್ಥಳಗಳನ್ನು ವ್ಯಾಪಾರಿ ದೃಷ್ಟಿಯಿಂದ ನೋಡಬಾರದು. ಶಾಸಕರು ಶುಲ್ಕ ವಿಧಿಸುವ ಪ್ರಸ್ತಾವ ಸಲ್ಲಿಸಿದ್ದು ನಿಜವೇ ಆಗಿದ್ದರೆ ಅದು ವಿಷಾದನೀಯ. ಕೂಡಲೇ ಇದನ್ನು ವಾಪಸ್ ಪಡೆಯಬೇಕು.
– ಶಿವಶಂಕರ್ ಎಸ್. ಹಾದಿಮನಿ, ಮಹಾಂತೇಶ ನಗರ, ಬೆಳಗಾವಿ

*
ವಿಪರ್ಯಾಸವೇ ಸರಿ
ವಿಶಿಷ್ಟ ಇತಿಹಾಸ ಹೊಂದಿರುವ ಕೋಟೆ ಕೆರೆ ಬೆಳಗಾವಿಗರ ಹೆಮ್ಮೆಯ ತಾಣ ಮತ್ತು ಹೊರಗಿನಿಂದ ಬಂದ ಬಡ ಜನರ ವಿಶ್ರಾಂತಿ ಧಾಮವಾಗಿದೆ. ಇಲ್ಲಿ ಪ್ರತಿನಿತ್ಯ ವಯಸ್ಕರು, ವಯೋವೃದ್ಧರು ವಾಯುವಿಹಾರಕ್ಕೆ ಬರುತ್ತಾರೆ. ಪ್ರಕೃತಿ ಸೌಂದರ್ಯ ಸವಿದು ಆರೋಗ್ಯ ಉತ್ತಮಪಡಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬೆಳಗಾವಿಗೆ ಬಂದಿದ್ದ ನಾವು ಊಟ ಮುಗಿಸಿ ಕೆರೆಯ ದಂಡೆಯಲ್ಲಿ ಕುಳಿತು ವಿಶ್ರಾಂತಿ ಪಡೆದಿದ್ದೆವು. ಈಗ, ಪ್ರವೇಶಕ್ಕೂ ಶುಲ್ಕ ವಿಧಿಸಿರುವುದು ವಿಪರ್ಯಾಸವೇ ಸರಿ.
– ಸಂಜು ಸಂಗೋಟಿ, ಕೊಟಬಾಗಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ

*
ಮರುಪರಿಶೀಲಿಸಿ
ಎಲ್ಲವನ್ನೂ ವ್ಯಾಪಾರ, ವಾಣಿಜ್ಯ ಉದ್ದೇಶದ ಮನೋಭಾವದಿಂದ ನೋಡುವುದು ಸರಿಯಲ್ಲ. ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸುವ ನಿರ್ಧಾರದ ಬಗ್ಗೆ ಜಿಲ್ಲಾಡಳಿತ ಮರುಪರಿಶೀಲಿಸಬೇಕು. ಒಂದು ವೇಳೆ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಆ ಹಣವನ್ನು ಬೆಳಗಾವಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ವ್ಯಯಿಸಲಿ.
– ಕೃಷ್ಣ ಹೊಸೂರ, ರಾಮದುರ್ಗ

*
ಶುಲ್ಕಕ್ಕೆ ವಿರೋಧ
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸಬಾರದು. ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಕೊಳಚೆ ನೀರು ಕೆರೆಗೆ ಸೇರುತ್ತಿರುವುದನ್ನು ತಡೆಯಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು.
– ಬಸವರಾಜ ಜಮನಾಳ, ವಂಟಮುರಿ ಕಾಲೊನಿ, ಬೆಳಗಾವಿ

*
ವ್ಯವಸ್ಥೆ ಕಲ್ಪಿಸಲಿ
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ವಿಧಿಸುವುದಾದರೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮಕ್ಕಳಿಗೆ ಆಟವಾಡಲು ಅಗತ್ಯವಾದ ಸಾಮಗ್ರಿಗಳನ್ನು ಹಾಕಬೇಕು. ನಾವು ಇಲ್ಲಿಗೆ ಹಿಂದೊಮ್ಮೆ ಬಂದಿದ್ದಾಗ ಶುಲ್ಕವಿರಲಿಲ್ಲ.
- ಅಭಿಷೇಕ್ ಬಡಿಗೇರ, ಪ್ರವಾಸಿಗ

*
ತೊಂದರೆ ಕೊಡಬೇಡಿ
ಇಲ್ಲಿ ಕೂಲಿ ಕಾರ್ಮಿಕರು ಹಾಗೂ ಸಮೀಪದ ಆಸ್ಪತ್ರೆಗಳಿಗೆ ಬರುವವರು ಕೋಟೆ ಕೆರೆಗೆ ಮಧ್ಯಾಹ್ನದ ವೇಳೆ ವಿಶ್ರಾಂತಿಗೆ ಬರುತ್ತಾರೆ. ಅವರು ಮೊದಲೇ ಬಡವರಾಗಿರುತ್ತಾರೆ. ಪ್ರವೇಶಕ್ಕೂ ಶುಲ್ಕ ವಿಧಿಸಿದರೆ ಅವರಿಗೆ ತೊಂದರೆಯಾಗುತ್ತದೆ. ಹೀಗಾಗಿ, ಶುಲ್ಕ ವಿಧಿಸುವ ನಿರ್ಧಾರ ಸರಿಯಲ್ಲ.
– ಅರ್ಜುನ್ ರಜಪೂತ್, ಆಂಜನೇಯ ನಗರ, ಬೆಳಗಾವಿ

*
ಕೆರೆಯ ದಂಡೆಯಲ್ಲಿ ವಾಯುವಿಹಾರ ಮಾಡುವವರಿಗೆ ಪ್ರವೇಶ ಶುಲ್ಕ ವಿಧಿಸಬಾರದು. ವೃದ್ಧರು, ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರುತ್ತಾರೆ. ಶುಲ್ಕ ವಿಧಿಸಿದರೆ ಅವರಿಗೆ ಹೊರೆಯಾಗುತ್ತದೆ. ಉದ್ಯಾನವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಕಾರಂಜಿ ವ್ಯವಸ್ಥೆಯನ್ನು ಮತ್ತೆ ಆರಂಭಿಸಿ ಆಕರ್ಷಿಸಬೇಕು.
– ಮಂಜುನಾಥ್ ಕೋಲಕಾರ, ನೆಹರೂ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.