ಬೆಳಗಾವಿ: ‘ನಗರದಲ್ಲಿ ಇಎಸ್‌ಐ ಆಸ್ಪತ್ರೆ ಮರುನಿರ್ಮಾಣ ಏಕೆ ವಿಳಂಬವಾಗುತ್ತಿದೆ ಎನ್ನುವ ವಿಚಾರವಾಗಿ ನನಗೆ ಮಾಹಿತಿ ಕೊರತೆ ಇದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದರಲ್ಲಿ ಸತ್ಯಾಂಶವಿಲ್ಲ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರ 2023ರ ಫೆಬ್ರುವರಿಯಲ್ಲಿ ಬೆಳಗಾವಿಗೆ 100 ಹಾಸಿಗೆಗಳ ಸಾಮರ್ಥ್ಯದ ಇಎಸ್ಐ ಆಸ್ಪತ್ರೆ ಮಂಜೂರುಗೊಳಿಸಿತು. ಆ ಕಾಮಗಾರಿಗಾಗಿ ಈಗ ಇರುವ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವ ನಿರ್ಣಯವನ್ನು ಲಾಡ್ ಕೈಗೊಂಡರು. ಅದಕ್ಕೆ ಒಪ್ಪಿದೆ. ಟೆಂಡರ್ ಕೂಡ ಕರೆಯಲಾಯಿತು. ಈ ಮಧ್ಯೆ, ಆಸ್ಪತ್ರೆಯಲ್ಲಿನ ಎಲ್ಲ ವೈದ್ಯಾಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಗೆ ವರ್ಗಾಯಿಸಿ, ಯಮನಾಪುರದಲ್ಲಿ ಹೊರರೋಗಿಗಳ ವಿಭಾಗ ತೆರೆಯಬೇಕೆಂದು ಆದೇಶಿಸಿದರು. ಅದಕ್ಕೂ ಒಪ್ಪಿಕೊಂಡೆವು. ನಂತರ ಸ್ಥಳೀಯ ಶಾಸಕರ ವಿನಂತಿ ಮೇರೆಗೆ ಆದೇಶ ಹಿಂಪಡೆದು, ಮತ್ತೊಂದು ಸಲ ಬಾಡಿಗೆ ಕಟ್ಟಡ ಹುಡುಕುವಂತೆ ಸಚಿವರು ಹೇಳಿದರು. ಇದರಿಂದಾಗಿ ಎರಡು ವರ್ಷಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಕಾಮಗಾರಿ ವಿಳಂಬದ ಕುರಿತಾಗಿ ಸಚಿವರ ಗಮನಸೆಳೆಯಲು ಹಲವು ಸಲ ದೂರವಾಣಿ ಮೂಲಕ ಕರೆ ಮಾಡಿದೆ. ಆದರೆ, ಸಚಿವರು ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಹಲವು ಸಲ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಿಗಲಿಲ್ಲ. ಹಾಗಾಗಿ ಈ ಕಾಮಗಾರಿ ಏಕೆ ವಿಳಂಬವಾಯಿತೆಂದು ನಾನು ಹೇಳುವುದು ಅನಿವಾರ್ಯವಾಯಿತು. ಹೀಗಿರುವಾಗ, ಕಾಮಗಾರಿ ವಿಚಾರವಾಗಿ ನನಗೆ ಮಾಹಿತಿ ಕೊರತೆ ಇದೆ ಎಂದು ತಾವು ಹೇಳಿದ್ದೀರಿ. ಅಭಿವೃದ್ಧಿ ಕೆಲಸದಲ್ಲಿ ನಾನು ಎಂದೂ ರಾಜಕಾರಣ ಮಾಡುವವನಲ್ಲ. ಹಾಗಾಗಿ ತಾವು ಮಾಡಿದ ಆದೇಶದಂತೆ ಬೇಗ ಆಸ್ಪತ್ರೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಿ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.