ADVERTISEMENT

ಬೆಳಗಾವಿ ಅಧಿವೇಶನದ ಹಿನ್ನೆಲೆ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ಇಳಕಲ್ ಸೀರೆ, ಕಿನ್ನಾಳ ಗೊಂಬೆ, ಖಾದಿ ಉತ್ಪನ್ನ ಮಾರಾಟ; ಅರ್ಜುನ ಜನ್ಯ– ಶಮಿತಾ ಮಲ್ನಾಡ್‌ ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 12:28 IST
Last Updated 21 ಡಿಸೆಂಬರ್ 2022, 12:28 IST
   

ಬೆಳಗಾವಿ: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿಅಧಿವೇಶನದ ಅಂಗವಾಗಿ ಡಿ.22ರಿಂದ 30ರವರೆಗೆ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ಗುರುವಾರ ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮೇಳದಲ್ಲಿ 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಉಚಿತ ಪ್ರವೇಶವಿದೆ.

ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಉಪ್ಪಿನಕಾಯಿ, ಖಾದಿ ಉತ್ಪನ್ನಗಳು, ಬಾಳೆ ನಾರಿನ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಉತ್ಪನ್ನಗಳು ಲಭ್ಯವಾಗಲಿವೆ.

ADVERTISEMENT

ಮೈದಾನದಲ್ಲಿ ಮಕ್ಕಳಿಗೆ ಆಟಿಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಉತ್ತರ ಕರ್ನಾಟಕ ಸೇರಿದಂತೆ ಹೆಸರುವಾಸಿ ಆಹಾರಗಳ 10 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರಮುಖವಾಗಿ, ಆಹಾರ ಮಳಿಗೆಗಳಲ್ಲಿ ಉತ್ತರ ಕರ್ನಾಟಕದ ಚುರುಮರಿ ಮಂಡಕ್ಕಿ, ಜೋಳದ ಖಡಕ್ ರೊಟ್ಟಿ ಸೇರಿದಂತೆ ಹೋಳಿಗೆ, ನೀರ್‍ದೋಸೆ ಮುಂತಾದ ಖಾದ್ಯಗಳು ದೊರೆಯಲಿವೆ.
*
25ರಂದು ಸಂಗೀತ ಸಂಜೆ:

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಡಾ.ಶಮಿತಾ ಮಲ್ನಾಡ್ ಹಾಗೂ ತಂಡದವರಿಂದ ಡಿ.25ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ, ಪ್ರತೀ ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

₹ 1 ಕೋಟಿ ಅನುದಾನ:

ಸ್ವ-ಸಹಾಯ ಗುಂಪಿನ ಮಹಿಳೆಯರನ್ನು ಉದ್ಯಮದಾರರನ್ನಾಗಿ ಬೆಳೆಸಲು ಕೇಂದ್ರ ಸರ್ಕಾರದ ನೆರವಿನಿಂದ ಕೊಪ್ಪಳ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕುಗಳಲ್ಲಿ ನಾಲ್ಕು ವರ್ಷಗಳ ಆರಂಭಿಕ ಗ್ರಾಮೀಣ ಉದ್ಯಮ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಗುವುದು ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕಿ ಡಾ. ರಾಗ ಪ್ರಿಯಾತಿಳಿಸಿದ್ದಾರೆ.

ಮೊದಲ ವರ್ಷದಲ್ಲಿ, 278 ವ್ಯವಹಾರ ಯೋಜನೆಯನ್ನು ಸಿದ್ದಪಡಿಸಲಾಗಿದ್ದು, ಹಣ ಬಿಡುಗಡೆ ಮಾಡಲಾಗುವುದು. ಫಲಾನುಭವಿಗಳಿಗೆ ಒಟ್ಟು ₹ 1 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.