ಕಾಶಪ್ಪನವರ, ಬೈಲಹೊಂಗಲದಲ್ಲಿ ಚನ್ನಮ್ಮ ಸಮಾಧಿಗೆ ಯತ್ನಾಳ್ ಭೇಟಿ
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಯಡಿಯೂರಪ್ಪ ಮಹಾಭ್ರಷ್ಟ. ವಿದೇಶದಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾನೆ. ಅವನ ಫೋಟೊ ಹಾಕಿದರೆ ವೋಟ್ ಹಾಕುವ ಕಾಲ ಹೋಯಿತು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.
ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ ಸೋಮವಾರ ಗೌರವ ಅರ್ಪಿಸಿ ಮಾತನಾಡಿದ ಅವರು, ‘ಯಡಿಯೂರಪ್ಪ ಕುಟುಂಬ ಬಿಜೆಪಿಯಿಂದ ಹೊರ ಬರುವವರೆಗೂ ನಾವು ಬಿಜೆಪಿಗೆ ಮರಳಿ ಹೋಗುವುದಿಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಬರಬೇಕೆ?’ ಎಂದು ಕೆಂಡ ಕಾರಿದರು.
‘ಯಡಿಯೂರಪ್ಪ ಲಿಂಗಾಯತ ಎನ್ನುವುದನ್ನು ಸಾಬೀತು ಮಾಡಲಿ. ಕೋವಿಡ್ ಕಾಲದಲ್ಲಿ ಲೂಟಿ ಮಾಡಿದ್ದಾನೆ. ಮೂರು ತಿಂಗಳಿಗೊಮ್ಮೆ ಅಪ್ಪ– ಮಕ್ಕಳು ಏಕೆ ದುಬೈಗೆ ಹೋಗುತ್ತಾರೆ ಎಂದು ಯೋಚಿಸಿದ್ದೀರಾ? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ನೈತಿಕತೆ ಇಲ್ಲ ಎಂದರು.
ವಿದೇಶದಲ್ಲಿ ಆಸ್ತಿ ಇಲ್ಲ ಎಂದು ಅವರು ಖಾತ್ರಿಯಾಗಿ ಹೇಳಲು ಸಾಧ್ಯವೇ? ಬ್ಯಾಂಕುಗಳಲ್ಲಿ ಕೋಟ್ಯಂತರ ಹಣ ಇಟ್ಟಿಲ್ಲ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಯಡಿಯೂರು ಸಿದ್ದಲಿಂಗೇಶ್ಬರ ಬಳಿ ಹೋಗಿ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.
‘ನಾನು ಈಗಾಗಲೇ ರಾಜ್ಯದಾದ್ಯಂತ ಪ್ರವಾಸ ಶುರು ಮಾಡಿದ್ದೇನೆ. ಎಲ್ಲ ಕಡೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸಾಕಷ್ಟು ಜನ ಸೇರಿದ್ದರು. ನನ್ನ ನಾಯಕತ್ವಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಅದೇ ಸಮಾವೇಶದಲ್ಲಿ ಒಬ್ಬ ಶಿಸ್ತು ಸಮಿತಿ ವ್ಯಕ್ತಿ ಕೂಡ ಬಂದಿದ್ದರು. ಏನು ನಡೆಯಿತು, ಜನ ಏನು ಇಷ್ಟಪಡುತ್ತಿದ್ದಾರೆ ಎಂಬುದನ್ನು ಆ ವ್ಯಕ್ತಿ ಬಿಜೆಪಿ ಹೈಕಮಾಂಡ್‌ಗೆ ಹೇಳಬೇಕು’ ಎಂದೂ ಹೇಳಿದರು.
‘ಹಂದಿಗಳ ಬಗ್ಗೆ ನಾನು ಮಾತನಾಡುವುದಿಲ್ಲ’
‘ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಲು ಕೂಡಲಸಂಗಮ ಸ್ವಾಮೀಜಿ ಅವರನ್ನು ದೆಹಲಿಗೆ ಯಾರು ಕರೆದುಕೊಂಡು ಹೋಗಿದ್ದರು ಎಂಬುದು ಗೊತ್ತಿದೆ. ನಾನು ಒಮ್ಮೆಯೂ ಇಂಥ ಕೆಲಸ ಮಾಡಿಲ್ಲ. ನನ್ನ ರಾಜಕೀಯ ಭವಿಷ್ಯದಲ್ಲಿ ಕೂಡಲಸಂಗಮ ಸ್ವಾಮೀಜಿ ಅವರನ್ನು ಉಪಯೋಗ ಮಾಡಿಕೊಂಡಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಮ್ಮದು ಹಾಗೂ ಕೂಡಲಸಂಗಮ ಸ್ವಾಮೀಜಿ ಅವರದು ಮೀಸಲಾತಿ ಹೋರಾಟದ ಸಂಬಂಧ. ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಕೂಡ ಉಪಯೋಗ ಮಾಡಿಕೊಂಡಿದ್ದಾರೆ. ಕೂಡಲಸಂಗಮ ಸ್ವಾಮೀಜಿ ಅವರನ್ನೇ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ ಹಂದಿಗಳ ಬಗ್ಗೆ ನನ್ನ ಬಳಿ ಪ್ರಶ್ನೆ ಮಾಡಬೇಡಿ’ ಎಂದೂ ಅವರು ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ಇಡೀ ರಾಜ್ಯದಲ್ಲಿ ಎಲ್ಲ ಕಡೆಯಿಂದ ಬೆಂಬಲ ಸಿಗುತ್ತಿದೆ. ನಾನು ಹೊಸ ಪಕ್ಷ ಕಟ್ಟಿದರೆ ಪರೋಕ್ಷವಾಗಿ ಕಾಂಗ್ರೆಸ್‌ಗೆ ಅನುಕೂಲ ಆಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇನೆ. ನಾನು ಕಾಂಗ್ರೆಸ್‌ನವರಿಂದಲೇ ಹಣ ಪಡೆದು ಪಕ್ಷ ಕಟ್ಟಿದ್ದೇನೆ ಎಂಬ ಆರೋಪವೂ ಬರಬಹುದು’ ಎಂದರು.
‘ಲಕ್ಷ್ಮೀ ಮಿದುಳು, ಹೃದಯ ಯಾರ ಕಡೆ ಇದೆ?’
‘ಯತ್ನಾಳ ಮಿದುಳಿಗೂ ನಾಲಿಗೆಗೂ ಲಿಂಕ್ ಇಲ್ಲ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಆದರೆ, ಅವರ ಮಿದುಳು ಯಾರ ಬಳಿ ಇದೆ, ಹೃದಯ ಯಾರ ಬಳಿ ಇದೆ ನಮಗೂ ಗೊತ್ತಿಲ್ಲ. ಇನ್ನೇನಾದ್ರೂ ಬಾಯಿ ಬಿಟ್ಟರೆ ನಾನು ಇನ್ನು ಬಹಳ ಮುಂದಕ್ಕೆ ಹೋಗಿ ಹೇಳಬೇಕಾಗುತ್ತದೆ’ ಎಂದೂ ತಿರುಗೇಟು ನೀಡಿದರು.
‘ಇದೇ ಲಕ್ಷ್ಮೀ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರನ್ನು ಪೊಲೀಸರಿಂದ ಹೊಡೆಸಿದರು. ಈಗ ಸ್ವಾಮೀಜಿ ಅವರು ಯತ್ನಾಳ ಪರ ನಿಂತಿದ್ದು ನೋವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೊಂದು ನೋವಾಗಿದ್ದರೆ ಅಮೃಂತಾಂಜನ್ ಕೊಡಲೇ, ಜಂಡೂಬಾಲ್ಮ್ ಕೊಡಲೇ? ಆಗ ಸ್ವಾಮೀಜಿ ಅವರನ್ನು ಬಳಸಿಕೊಂಡರು. ಈಗ ಅದೇ ಸ್ವಾಮೀಜಿ ಅವರಿಂದಾಗಿ ಬ್ಯಾನಿ ಆಗುತ್ತಿದೆಯೇ?’ ಎಂದೂ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಯತ್ನಾಳ ಮರಳಿ ಸೇರಿಸಿಕೊಳ್ಳದಿದ್ದರೆ ಹೋರಾಟ’: ಮೃತ್ಯುಂಜಯ ಸ್ವಾಮೀಜಿ
‘ಬಸನಗೌಡ ಪಾಟೀಲ ಯತ್ನಾಳ ಅವರು ಲಿಂಗಾಯತ ಪಂಚಮಸಾಲಿ ಸಮಾಜದ ಬಹು ದೊಡ್ಡ ಶಕ್ತಿ. ಆ ಶಕ್ತಿ ಹತ್ತಿಕ್ಕಲು ಯಾರಿಂದಲೂ ಆಗದು. ಕೇಂದ್ರ ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಮೇ 11ಕ್ಕೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು. ಮುಖಂಡರಾದ ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಶಂಕರ ಮಾಡಲಗಿ, ಎಂ.ವೈ. ಸೋಮಣ್ಣವರ, ಶಿವಾನಂದ ಬೆಳಗಾವಿ, ರಾಜು ನರಸನ್ಮವರ, ಗಂಗಪ್ಪ ಗುಗ್ಗರಿ, ಬಾಳನಗೌಡ ಪಾಟೀಲ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.