ADVERTISEMENT

ಶಾಲೆಗಳಲ್ಲಿ ಸೌಲಭ್ಯ: ಅಸಮಾನತೆ ಹೋಗಲಾಡಿಸಲು ಕ್ರಮ

ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 14:16 IST
Last Updated 8 ಏಪ್ರಿಲ್ 2022, 14:16 IST
ಬೆಳಗಾವಿಯ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿದರು
ಬೆಳಗಾವಿಯ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿದರು   

ಬೆಳಗಾವಿ: ‘ಅನೇಕ ಕಡೆ ಶಾಲೆ, ಕೊಠಡಿ ಹಾಗೂ ಶಿಕ್ಷಕರ ಅವಶ್ಯಕತೆ ಇದೆ. ಇವೆಲ್ಲವೂ ಕೆಲವೆಡೆ ಅಗತ್ಯಕ್ಕಿಂತಲೂ ಜಾಸ್ತಿ ಇವೆ. ಈ ಅಸಮಾನತೆ ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು’ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಭರವಸೆ ನೀಡಿದರು.

ಇಲ್ಲಿನ ರಾಣಿ ಚನ್ನಮ್ಮ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಶಾಲೆಯ ಮುಖ್ಯಶಿಕ್ಷಕ ವಿ.ಎಂ. ಬೇವಿನಕೊಪ್ಪಮಠ ಅವರು ದಾನಿಗಳ ನೆರವಿನಂದಲೇ ಕೊಠಡಿ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ರೀತಿಯ ಜವಾಬ್ದಾರಿ ತೆಗೆದುಕೊಳ್ಳುವಿಕೆ ಮತ್ತು ಇಲ್ಲಿನ ಮಹಿಳೆಯರು ಸೇರಿದಂತೆ ಸಮುದಾಯದ ಸಹಕಾರ ಆದರ್ಶವಾಗಿದೆ. ಸರ್ಕಾರಿ ಶಾಲೆಯೆಡೆಗೆ ಮಕ್ಕಳನ್ನು ಆಕರ್ಷಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ADVERTISEMENT

‘ಈ ಶಾಲೆಯಲ್ಲಿ 225 ವಿದ್ಯಾರ್ಥಿಗಳಿದ್ದು, 1ರಿಂದ 8ನೇ ತರಗತಿಯವರೆಗೆ ಇದೆ. ಕೇವಲ 5 ಕೊಠಡಿಗಳಿರುವುದರಿಂದ ಕಲಿಕೆಗೆ ತೊಂದರೆ ಆಗುತ್ತಿರುವುದರಿಂದ ಮತ್ತಷ್ಟು ಕೊಠಡಿಗಳನ್ನು ಕಟ್ಟಿಸಲು ಶಾಸಕ ಅಭಯ ಪಾಟೀಲ ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿ 9ನೇ ತರಗತಿ ಇಲ್ಲದಿರುವುದರಿಂದ ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು ಪ್ರೌಢಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ 9ನೇ ತರಗತಿ ಆರಂಭಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ಶಾಲಾ ಕೊಠಡಿ ನಿರ್ಮಿಸಲು ಆರ್ಥಿಕ ಹಾಗೂ ಇತರ ರೀತಿಯಲ್ಲಿ ನೆರವಾದ ನಿತ್ಯಾನಂದ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ರೋಹನ್ ಜುವಳಿ ಮತ್ತು ನಿರ್ದೇಶಕ ಪ್ರಭಾಕರ ನಾಗರಮುನ್ನೋಳಿ, ಶ್ರುತಿ ಕನ್‌ಸ್ಟ್ರಕ್ಷನ್ಸ್‌ನ ಮದನಕುಮಾರ ಭೈರಪ್ಪನವರ್, ಸ್ನೇಹಾ ರಾವ್, ಸುಷ್ಮಾ ಪಾಟೀಲ, ನಿಧಿ ಬಾಟೆ, ರಜನಿ ರಾವ್, ಮಹೇಶ ಇನಾಮದಾರ, ಗಿರೀಶ್ ಪೈ, ರಾಧಿಕಾ ಮಿರ್ಚಿ, ರಾಜು ಕಾಣಕೋಣಕರ್, ಭರತ್ ದೇಶಪಾಂಡೆ, ಎಸ್.ಎ. ಚಿಕೋರ್ಡೆ, ರೂಪಾ ಬದನ್, ಸುರೇಶ ಪ್ರಭು, ಡಾ.ಸಂಗೀತಾ ನಾಯಕ, ಸಾಯಿರಾ ರಂಗರೇಟ, ಎಂ.ಕೆ.ಹೆಗಡೆ, ಜ್ಯೋತ್ಸ್ನಾ ಪೈ, ಶೀಲಾ ದೇಶಪಾಂಡೆ, ಮುಖ್ಯಶಿಕ್ಷಕ ವಿ.ಎಂ. ಬೇವಿನಕೊಪ್ಪಮಠ ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಗೋಕಾಕ ಇದ್ದರು. ಮುಖ್ಯಶಿಕ್ಷಕ ಎಂ.ವಿ. ಬೇವಿನಕೊಪ್ಪಮಠ ಪ್ರಾಸ್ತಾವಿಕ ಮಾತನಾಡದರು. ಶಿಕ್ಷಕಿ ಎಸ್.ಐ. ಯಡವಣ್ಣವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.