ADVERTISEMENT

ಮೂಡಲಗಿ | ಬರಡು ಭೂಮಿಯಲ್ಲಿ ಭರ್ಜರಿ ಬೆಳೆ, ರೈತ ಬಸವಗೌಡ ಸಾಧನೆ

ಕೊಪ್ಪದಟ್ಟಿ ಗ್ರಾಮದ ರೈತ ಬಸನಗೌಡ ಪಾಟೀಲ ಅವರ ವಿಶಿಷ್ಟ ಸಾಧನೆ

ಬಾಲಶೇಖರ ಬಂದಿ
Published 17 ಮಾರ್ಚ್ 2023, 6:24 IST
Last Updated 17 ಮಾರ್ಚ್ 2023, 6:24 IST
ಮೂಡಲಗಿ ತಾಲ್ಲೂಕಿನ ಕೊಪ್ಪದಟ್ಟಿಯ ರೈತ ಬಸನಗೌಡ ಪಾಟೀಲ ಅವರು ಬೆಳೆದ ಬಾಳೆ ತೋಟ
ಮೂಡಲಗಿ ತಾಲ್ಲೂಕಿನ ಕೊಪ್ಪದಟ್ಟಿಯ ರೈತ ಬಸನಗೌಡ ಪಾಟೀಲ ಅವರು ಬೆಳೆದ ಬಾಳೆ ತೋಟ   

ಮೂಡಲಗಿ: ತಾಲ್ಲೂಕಿನ ಕೊಪ್ಪದಟ್ಟಿ ಗ್ರಾಮದ ರೈತ ಬಸನಗೌಡ ಹನಮಂತಗೌಡ ಪಾಟೀಲ ಅವರು, ಗುಡ್ಡಗಾಡಿನ ಬರಡು ಭೂಮಿಯನ್ನು ಫಲವತ್ತತೆಗೊಳಿಸಿ ಕೃಷಿಯಲ್ಲಿ ಯಶಸ್ಸು ಕಾಣುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

72 ವಯಸ್ಸಿನ ಬಸಗೌಡ ಪಾಟೀಲ ಅವರದು ಕೃಷಿಯಲ್ಲಿ ಬತ್ತದ ಉತ್ಸಾಹ. ಬಿಎಸ್‌.ಸಿ ಅಗ್ರಿ ಪದವೀಧರರಾದ ಅವರು, ಸರ್ಕಾರಿ ನೌಕರಿಗೆ ಕಾಯದೇ ಕೃಷಿಯನ್ನು ನೆಚ್ಚಿಕೊಂಡವರು. ಭೂಮಿ ನಂಬಿ ಕೆಟ್ಟವರಿಲ್ಲ ಎಂಬ ಪದಕ್ಕೆ ನಿದರ್ಶನವಾಗಿ ನಿಂತವರು.

ನೂರಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ತೆಗೆಸಿದರು. ಅವೆಲ್ಲ ಫಲ ನೀಡಲಿಲ್ಲ. ಆದರೆ, ಬಸನಗೌಡ ಅವರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಇದ್ದ ನೀರಲ್ಲಿ ಒಣ ಬೇಸಾಯ ಮಾಡಿದರು. ಈ ಪ್ರಯತ್ನ ಅವರನ್ನು ಯಶಸ್ಸಿನತ್ತ ಸಾಗಿಸಿತು.

ADVERTISEMENT

ಗುಡ್ಡ ಮತ್ತು ಮಡ್ಡಿ ಆವರಿಸಿದ್ದ ತಮ್ಮ ಭೂಮಿಯನ್ನು ಮೊದಲು ಸಮಪಾತಳಿ ಮಾಡಿದರು. ನೀರು ಭೂಮಿಯ ತುಂಬೆಲ್ಲ ಸರಿಯಾಗಿ ಹರಿಯುವಂತೆ ಮಾಡಿದರು. ನೀರು ನಿಲ್ಲಿಸಲು ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿದರು. ಮಳೆನೀರು ಹೆಚ್ಚಾದಲ್ಲಿ ಅದನ್ನು ಹೊರಹಾಕಲು ಅಲ್ಲಲ್ಲಿ ಸೋಡೆ ಮಾಡಿದರು.

ಕಳೆದ ನಾಲ್ಕು ವರ್ಷಗಳಿಂದ ಘಟ‍ಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಯುತ್ತಿರುವುದರಿಂದ 20 ವರ್ಷಗಳ ಹಿಂದೆ ಬಂದಾಗಿದ್ದ ಬೊರ್‌ವೆಲ್‌ಗಳಲ್ಲಿ ಈಗ ನೀರು ಚಿಮ್ಮುತ್ತಿದೆ.

ಏನೇನು ಬೆಳೆಯುತ್ತಾರೆ?: 20 ಎಕರೆ ಕಬ್ಬು, 7 ಎಕರೆ ಬಾಳೆಯನ್ನು ಹನಿ ನೀರಾವರಿಯಲ್ಲಿ ಬೆಳೆಯುತ್ತಿದ್ದಾರೆ. ಕಬ್ಬು ನಾಟಿ ಮಾಡುವ ಪೂರ್ವದಲ್ಲಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು ಅವರ ರೂಢಿ.

ವೈಜ್ಞಾನಿಕ ರೀತಿಯಲ್ಲಿ ಇಂಬಾಗಿ ಬೀಜ ನಾಟಿ ಮಾಡುವುದರಿಂದ ಗಾಳಿ, ಬಿಸಿಲು ಮತ್ತು ಪೌಷ್ಟಿಕ ಅಂಶಗಳ ಬೆಳೆಗೆ ಯಥೇಚ್ಚವಾಗಿ ದೊರೆಯುತ್ತವೆ. ನಿರ್ವಹಣೆ ಸರಿಯಾಗಿ ಆಗಿ ಉತ್ತಮ ಇಳುವರಿ ಸಿಗುತ್ತದೆ. ಮೊದಲು ಎಕರೆಗೆ 30ರಿಂದ 40 ಟನ್‌ ಕಬ್ಬು ಇಳುವರಿ ಬರುತ್ತಿತ್ತು. ಈಗ 75ರಿಂದ 80 ಟನ್‌ ಇದೆ.

ಜಿ9 ತಳಿಯ ಬಾಳೆ ಅಗಿಯನ್ನು ಮಹಾರಾಷ್ಟ್ರದ ಜಲಗಾಂವದಿಂದ ತರಿಸುತ್ತಾರೆ. ಒಂದು ಅಗಿಗೆ ₹18ರಂತೆ ಖರೀಸುತ್ತಾರೆ. ಸಾಲಿನಿಂದ ಸಾಲಿಗೆ 6 ಅಡಿ ಮತ್ತು ಸಸಿಯಿಂದ ಸಸಿಗೆ 5 ಅಡಿ ಅಂತರದಲ್ಲಿ ಬಾಳೆ ಅಗಿಯನ್ನು ನಾಟಿ ಮಾಡುತ್ತಾರೆ. ಒಂದು ವರ್ಷದಲ್ಲಿ ಎಕರೆಗೆ 40ರಿಂದ 45 ಟನ್‌ ಇಳುವರಿ ಪಡೆಯುತ್ತಾರೆ.

‘ಏಳು ಎಕರೆ ಬಾಳೆ ಬೆಳೆಯಲು ಒಂದು ದಿನ ಆಳುಗಳನ್ನು ಬಳಿಸಿಲ್ಲ. ನಾನೇ ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಬಾಳೆ ಪಡದಲ್ಲಿ ದುಡಿಯುತ್ತೇನೆ’ ಎನ್ನುತ್ತಾರೆ ಬಸನಗೌಡ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.