ಮೂಡಲಗಿ: ಒಂದೂವರೆ ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುವ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಕೃಷಿಕ ಬಾಳಪ್ಪ ಕೆಂಪಣ್ಣ ಬಬಲಿ ಸಣ್ಣ ರೈತರಿಗೆ ಮಾದರಿ ಎನಿಸಿದ್ದಾರೆ.
ಅರ್ಧ ಎಕರೆಯಲ್ಲಿ ಸೋರೆಕಾಯಿ ಕೃಷಿ ಮಾಡುತ್ತಿದ್ದಾರೆ. ವರ್ಷದಲ್ಲಿ 3 ಬೆಳೆಗಳನ್ನು ತೆಗೆಯುತ್ತಾರೆ. ಭೂಮಿಗೆ ಬೀಜ ಹಾಕಿದ 2 ತಿಂಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸಿ ಒಂದೊಂದು ಬಳ್ಳಿ ಕನಿಷ್ಠ 100 ಸೋರೆಕಾಯಿ ಕೊಡುತ್ತದೆ.
‘4 ತಿಂಗಳ ಮುಗಿಯುವುದರೊಳಗ ಅರ್ಧ ಎಕರೆ ಸೋರೆಕಾಯಿ ಬೆಳೆಗೆ ₹ 60ರಿಂದ ₹ 70ಸಾವಿರ ಕೈಗೆ ಸಿಗತೈತ್ರೀ’ ಎನ್ನುತ್ತಾರೆ ಬಾಳಪ್ಪ.
ಈ ರೀತಿ ವರ್ಷದಲ್ಲಿ 3 ಬೆಳೆ ತೆಗೆಯುವುದರಿಂದ ಅರ್ಧ ಎಕರೆಯಲ್ಲಿ ₹ 2 ಲಕ್ಷ ಗಳಿಕೆಗೆ ಕೊರತೆ ಇಲ್ಲ ಎಂದು ನಗೆ ಬೀರುತ್ತಾರೆ. ಅರ್ಧ ಕೆ.ಜಿ., ಒಂದು ಕೆ.ಜಿ. ಮತ್ತು ಒಂದೂವರೆ ಕೆ.ಜಿ.ಯಷ್ಟು ತೂಗುವ ಸೋರೆಕಾಯಿಗಳನ್ನು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ರವಾನಿಸುತ್ತಾರೆ. ನೂರಕ್ಕೆ ನೂರರಷ್ಟು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವುದಕ್ಕೆ ತುಕ್ಕಾನಟ್ಟಿಯ ಕೃಷಿ ಕೇಂದ್ರದಿಂದ ಸಾವಯವ ದೃಢೀಕರಣ ಪತ್ರ ದೊರೆತಿದೆ. ಹೀಗಾಗಿ ಈ ಸೋರೆಗೆ ಕೆಲವು ಕಂಪನಿಗಳಿಂದ ನಿರಂತರವಾಗಿ ಬೇಡಿಕೆ ಇದೆ. ಹಣ ಪಾವತಿಯೂ ಸರಿಯಾಗಿ ನಡೆಯುತ್ತದೆ ಎನ್ನುತ್ತಾರೆ ಅವರು.
ಸಿದ್ಧತೆ:ಸೋರೆ ಬೀಜ ನಾಟಿಗೆ ಪೂರ್ವದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಾರೆ. 2 ಇಲ್ಲವೇ 3 ಅಡಿ ಅಂತರದಲ್ಲಿ ಬೀಜ ನಾಟಿ ಮಾಡುತ್ತಾರೆ. ಕೊಳವೆ ಬಾವಿ ಇದ್ದು, ಹನಿ ನೀರಾವರಿ ಅಳವಡಿಸಿದ್ದಾರೆ. ಜೀವಾಮೃತ, ಎರೆಹುಳ ಗೊಬ್ಬರ ತಯಾರಿಕೆ ಘಟಕ ಇದೆ. 2 ಎಮ್ಮೆ, 2 ಆಕಳುಗಳನ್ನು ಸಾಕಿದ್ದು ಅವುಗಳ ಸಗಣೆ, ಗಂಜಲವನ್ನು ಸಾವಯವ ಕೃಷಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
‘ಆರು ವರ್ಷಾತ್ರೀ ಜಮೀನಿಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಹಾಕಿಲ್ಲರ್ರೀ. ಹಿಂಗಾಗಿ ವಿಷಮುಕ್ತ ಭೂಮಿ ಆಗೈತ್ರೀ. ಮನಿ ಮಂದಿಗೆ ರೋಗ ರುಜಿನಗಳು, ಬಿಪಿ, ಶುಗರ್ ಇಲ್ಲರ್ರೀ' ಎಂದು ಬಾಳಪ್ಪ ಖುಷಿಯಿಂದ ಹೇಳುತ್ತಾರೆ.
ಮಿಶ್ರ ಬೆಳೆ:ಸೋರೆಕಾಯಿ ಬೆಳೆಯೊಂದಿಗೆ ಮಿಶ್ರ ಬೆಳೆಯಾಗಿ ಸೌತೆಯ 3 ಬೆಳೆ ತೆಗೆದು ವರ್ಷಕ್ಕೆ ₹ 1.50 ಲಕ್ಷ ಆದಾಯ ಕಾಣುತ್ತಿದ್ದಾರೆ. ಉಳಿದ ಎಕರೆ ಭೂಮಿಯಲ್ಲಿ ಟೊಮೆಟೊ, ಬದನೆ, ಬೆಂಡೆಕಾಯಿ ಹೀಗೆ ಮಿಶ್ರ ಕೃಷಿ ಮಾಡಿ ವರ್ಷದಲ್ಲಿ ₹ 2 ಲಕ್ಷಕ್ಕೂ ಮಿಕ್ಕಿ ವರಮಾನ ಗಳಿಸಿದ್ದಾರೆ. ಒಂದು ಬೆಳೆಯನ್ನು ನಿರಂತರವಾಗಿ ಒಂದೇ ತಾಕಿನಲ್ಲಿ (ಭೂಮಿಯಲ್ಲಿ) ಬೆಳೆಯದೇ, ಪ್ರತಿ ಬಾರಿ ಬದಲಾಯಿಸುತ್ತಾರೆ. ಇದರಿಂದ ಉತ್ತಮ ಇಳುವರಿ ದೊರೆಯುತ್ತದೆ ಎನ್ನುವುದು ಅವರ ಅನುಭವದ ಮಾತು.
‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವಂತೆ ಅವರು ತಮಗಿರುವ ಜಮೀನಿನಲ್ಲೇ ಯಶಸ್ಸು ಕಂಡಿದ್ದಾರೆ. ಅರಭಾವಿ ತೋಟಗಾರಿಕೆ ಕಾಲೇಜು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಾಳಪ್ಪನವರ ತೋಟಕ್ಕೆ ರೈತರೊಂದಿಗೆ ಭೇಟಿ ಕೊಡುತ್ತಾರೆ. ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ‘ಉತ್ತಮ ಕೃಷಿಕ’ ಪ್ರಶಸ್ತಿ, ಕೃಷಿಕ ಸಮಾಜದಿಂದ, ತುಕ್ಕಾನಟ್ಟಿ ಬರ್ಡ್ಸ್ ಸಂಸ್ಥೆಯಿಂದ ‘ಉತ್ತಮ ರೈತ’ ಎಂಬ ಸಮ್ಮಾನಕ್ಕೆ ಭಾಜನವಾಗಿದ್ದಾರೆ.
ಮಕ್ಕಳಾದ ಹನುಮಂತ ಮತ್ತು ಸಿದ್ದಪ್ಪ ಕೃಷಿಯಲ್ಲಿ ತಂದೆಗೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ, ತರಕಾರಿ ಮಾರುಕಟ್ಟೆ ಮಾಡಲು ಕಷ್ಟವಾಗುತ್ತಿಲ್ಲ. ‘ತರಕಾರಿ ಬೆಳ್ಯಾಗ ವಾರಾವಾರಾ ಹಣ ಬರತೈತ್ರೀ. ಮಾಡಿದ್ದ ಸಾಲಾ, ಬಡ್ಡಿ ಮುಟ್ಟಿ ಕೈಯಾಗ ರೊಕ್ಕ ಇರತೈತ್ರೀ. ಕಬ್ಬಿಂದು ವರ್ಷಕ್ಕೊಮ್ಮೆ ಬರೋದರಿಂದ್ರ ಕಷ್ಟ ಆಗತೈತ್ರೀ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ: 9916400723.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.