ADVERTISEMENT

ಮೋದಿ ಬದಲಾಗದಿದ್ದರೆ, ಸರ್ಕಾರವನ್ನೇ ಬದಲಾಯಿಸ್ತೀವಿ: ರೈತ ಮುಖಂಡ ಬಾಬಾಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:49 IST
Last Updated 31 ಮಾರ್ಚ್ 2021, 13:49 IST
ಬೆಳಗಾವಿಯಲ್ಲಿ ಬುಧವಾರ ನಡೆದ ರೈತ ಮಹಾಪಂಚಾಯತ್‌ನಲ್ಲಿ ರೈತರು ಬಿರು ಬಿಸಿಲಿನಲ್ಲೇ ಕುಳಿತಿದ್ದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಬುಧವಾರ ನಡೆದ ರೈತ ಮಹಾಪಂಚಾಯತ್‌ನಲ್ಲಿ ರೈತರು ಬಿರು ಬಿಸಿಲಿನಲ್ಲೇ ಕುಳಿತಿದ್ದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರೇ ಇನ್ನಾದರೂ ಬದಲಾಗಿ. ಇಲ್ಲವೇ ನಾವು ಸರ್ಕಾರವನ್ನು ಬದಲಾಯಿಸುತ್ತೇವೆ’ ಎಂದು ರೈತ ಮುಖಂಡ ಬಾಬಾಗೌಡ ಪಾಟೀಲ ಎಚ್ಚರಿಕೆ ನೀಡಿದರು.

ಅಖಿಲ‌ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರಾಳ ಕೃಷಿ ಕಾನೂನುಗಳ ವಿರುದ್ಧ ಹಾಗೂ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಶಾಸನಬದ್ಧಗೊಳಿಸಲು ಆಗ್ರಹಿಸಿ ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ರೈತ ಮಹಾಪಂಚಾಯತ್’ ಉದ್ದೇಶಿಸಿ ಅವರು ಮಾತನಾಡಿದರು.

‘ರೈತರ ಭೂಮಿ ಕಸಿದುಕೊಳ್ಳಲು, ಕಂಪನಿಗಳು ಹೇಳಿದಷ್ಟು ರೇಟ್‌ಗೆ ಕೊಡಬೇಕು ಎನ್ನುವುದು ಹಾಗೂ ಗ್ರಾಹಕರ ಸುಲಿಗೆ ಮಾಡುವ ಕಾನೂನುಗಳನ್ನು ತಂದಿರುವುದು ಸರಿಯಲ್ಲ. ಮೋದಿ ಗೆಲ್ಲಿಸಿ ಬಹಳ ದೊಡ್ಡ ತಪ್ಪು ಮಾಡಿದ್ದೇವೆ. ಇಂಥ ಕಾನೂನುಗಳನ್ನು ಮಾಡುತ್ತೇವೆ ಎಂದಿದ್ದರೆ ನಾವು ಬೆಂಬಲಿಸುತ್ತಿರಲಿಲ್ಲ. ನಿಮ್ಮ‌ ವಿರುದ್ಧ ಹೋರಾಟ ರೂಪಿಸುತ್ತಿದ್ದೆವು’ ಎಂದು ಗುಡುಗಿದರು.

ನಿರುದ್ಯೋಗಿಗಳಾಗಿದ್ದಾರೆ:

‘ಈ ಸರ್ಕಾರ ಬಂದ ಮೇಲೆ ಪ್ರತಿ ಹಳ್ಳಿಯಲ್ಲೂ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲಾಭದಾಯಕ ಅಲ್ಲದಿರುವುದರಿಂದ ಅವರು ಕೃಷಿ ಮಾಡುತ್ತಿಲ್ಲ. ಮೋದಿ, ದೊಡ್ಡ ಪಾಪ ಮಾಡಿದ್ದೀರಿ’ ಎಂದು ಟೀಕಿಸಿದರು. ‘ಈ ಡಿಜಿಟಲ್ ಸರ್ವಾಧಿಕಾರಿಯನ್ನು ಡಿಜಿಟಲ್ ತಂತ್ರದ ಮೂಲಕವೇ ಮನೆಗೆ ಕಳುಹಿಸೋಣ. ಅದಕ್ಕಾಗಿ ರೈತರೆಲ್ಲರೂ ದೆಹಲಿಗೆ ಹೋಗೋಣ’ ಎಂದರು.

‘ಇದು 2ನೇ ಸ್ವಾತಂತ್ರ್ಯ ಚಳವಳಿ. ಇದರಲ್ಲಿ ಗೆಲ್ಲದಿದ್ದರೆ ರೈತರು ಹಾಗೂ ಬಡವರು ಗುಲಾಮಗಿರಿಯಲ್ಲೇ ಇರಬೇಕಾಗುತ್ತದೆ’ ಎಂದು ಮುಖಂಡ ಬಿ.ಆರ್. ಪಾಟೀಲ ಎಚ್ಚರಿಸಿದರು.

ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ಕೇಂದ್ರ ಸರ್ಕಾರವು 2 ವರ್ಷಗಳಿಂದ ಕಬ್ಬಿಗೆ ಎಫ್‌ಆರ್‌ಪಿ ಹೆಚ್ಚಿಸಲೇ ಇಲ್ಲ. ಅವೈಜ್ಞಾನಿಕ ಬೆಲೆ ನಿಗದಿಪಡಿಸಲಾಗುತ್ತಿದೆ. ಕಾರ್ಖಾನೆ ಮಾಲೀಕರ ಪಿತೂರಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ದೂರಿದರು.

ಮುಖಂಡರಾದ ಮಧುಸೂದನ್ ತಿವಾರಿ, ಶಂಕರ ಅಂಬಲಿ, ಎಸ್. ಪಡಸಲಗಿ ಮಾತನಾಡಿದರು.

ರೈತ ಸಂಘದ ಧ್ವಜಾರೋಹಣವನ್ನು ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೀಕರ ನೆರವೇರಿಸಿದರು. ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸಲಾಯಿತು. ರೈತ ಸಂಘವು ಬಸವ ಕಲ್ಯಾಣದಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆಯಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ರೈತರ ಸ್ಮಾರಕ ನಿರ್ಮಾಣಕ್ಕೆ ಬಳಸಲು ಬಿ.ಆರ್‌. ಪಾಟೀಲ ಅವರು ರಾಕೇಶ್ ಟಿಕಾಯತ್ ಅವರಿಗೆ ಹಸ್ತಾಂತರಿಸಿದರು.

ಮುಖಂಡರಾದ ಚೂನಪ್ಪ ಪೂಜಾರಿ, ಸಿದಗೌಡ ಮೋದಗಿ, ಜಯಶ್ರೀ ಗುರನ್ನವರ ಮೊದಲಾದವರು ಇದ್ದರು.

‘ಕಂಪನಿಯೇ ಆಳಲಿದೆ’

ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ‘ಅನ್ನ ಹಾಕುತ್ತಿರುವ ರೈತ ಕುಲ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರವೇ, 15 ವರ್ಷಗಳಲ್ಲಿ 3.45 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ವರ್ಷಗಳ ಅಂಕಿ ಅಂಶ‌ ಬಿಡುಗಡೆಗೆ ಸರ್ಕಾರ ಹೆದರುತ್ತಿದೆ’ ಎಂದು ತಿಳಿಸಿದರು.

‘ಭೂಮಿ ಹಾಗೂ ಭೂತಾಯಿಯ ಮಕ್ಕಳ ಸಂಬಂಧ ಹಾಳು ಮಾಡುವ ಕಾನೂನು ತರಲಾಗಿದೆ. ಮುಂದಿನ ದಿನಗಳಲ್ಲಿ ಒಂದೇ‌ ಕಂಪನಿ ಈ ದೇಶ ಆಳುವುದರಲ್ಲಿ ಸಂದೇಹವಿಲ್ಲ. ಚಳವಳಿ ಮಾಡಲಿಲ್ಲವೆಂದರೆ ಒಕ್ಕಲುತನ ಉಳಿಯುವುದಿಲ್ಲ’ ಎಂದರು.

ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ, ‘ಪೆಂಡಾಲ್‌ಗೆ ಅವಕಾಶ ಕೊಡದೆ ನಮ್ಮನ್ನು ಬಿಸಿಲಿನಲ್ಲಿ‌ ನಿಲ್ಲಿಸಿದ ಯಡಿಯೂರಪ್ಪ ಸರ್ಕಾರವನ್ನು ನಾವು ಬಿಸಿಲಲ್ಲಿ ನಿಲ್ಲಿಸದಿದ್ದರೆ ಹುತಾತ್ಮರಾದ ರೈತರಿಗೆ ಗೌರವ ಸಿಗುವುದಿಲ್ಲ’ ಎಂದು ಕರೆ ನೀಡಿದರು.

***

ಟೋಲ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಹಸಿರು ಟವೆಲ್ ಹಾಕಿಕೊಳ್ಳುವವರು ಬಂದು ರೈತ ಚಳವಳಿ ಹಾಳಾಗಿದೆ.

ಕೆ.ಟಿ. ಗಂಗಾಧರ,ರೈತ ಸಂಘದ ವರಿಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.