ADVERTISEMENT

ರೈತ ಮುಖಂಡರನ್ನು ಎಳೆದಾಡಿದ ಪೊಲೀಸರು

ಮುಖ್ಯಮಂತ್ರಿಗೆ ಘೇರಾವ್ ಯತ್ನ; ಪ್ರತಿಭಟನೆ ಬಿಸಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 10:58 IST
Last Updated 5 ಅಕ್ಟೋಬರ್ 2019, 10:58 IST

ಬೆಳಗಾವಿ: ‘ಸಂತ್ರಸ್ತರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರಿಗೆ ಶುಕ್ರವಾರ ಘೇರಾವ್ ಹಾಕಲು ಮುಂದಾದ 10 ಮಂದಿ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಇಲ್ಲಿನ ಸರ್ಕಾರಿ ಅತಿಥಿಗೃಹದಿಂದ ತೆರಳುತ್ತಿದ್ದ ಮುಖ್ಯಮಂತ್ರಿ ವಿರುದ್ಧ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಮುಖಂಡರು ಘೋಷಣೆ ಕೂಗಿದರು. ಬಿಜೆಪಿಯ 25 ಸಂಸದರು ಸತ್ತು ಹೋಗಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿ ಕಾರ್‌ನಿಂದ ಇಳಿದು ತಮ್ಮಿಂದ ಮನವಿ ಸ್ವೀಕರಿಸಲಿಲ್ಲ, ಅಹವಾಲು ಆಲಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದ ರೈತ ಮಹಿಳೆ ಜಯಶ್ರೀ ಗುರಣ್ಣವರ ಮೊದಲಾದವರನ್ನು ಪೊಲೀಸರು ಎಳೆದಾಡಿದರು. ಬಲವಂತವಾಗಿ ಎತ್ತಿಕೊಂಡು ಬಂದು ರಸ್ತೆ ಬದಿಗೆ ತಂದು ಬಿಟ್ಟರು.

‘ರೈತರ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ನಮ್ಮಿಂದ ಮನವಿ ಸ್ವೀಕರಿಸಿ ಅಹವಾಲು ಆಲಿಸುವ ಕಾಳಜಿ ತೋರಿಸಬೇಕಿತ್ತು. ನಿನ್ನೆ ಮನವಿ ಕೊಡಲು ಹೋದಾಗಲೂ ನೀವು ಹೇಳಿದಷ್ಟು ಪರಿಹಾರ ಕೊಡಲಾಗದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ರೇಗಾಡಿದರು. ಹೀಗಾದರೆ ಹೇಗೆ? ಸರ್ಕಾರದ ಬಳಿ ಹಣ ಇಲ್ಲವಾದರೆ ಸಂತ್ರಸ್ತರನ್ನು ಭೇಟಿಯಾಗುವ ನಾಟಕವನ್ನೇಕೆ ಮಾಡುತ್ತಿದ್ದಾರೆ’ ಎಂದು ಜಯಶ್ರೀ ಕೇಳಿದರು.

ADVERTISEMENT

‘ಪ್ರತಿಭಟನೆಗೆ ಮುಂದಾದರೆ ಪೊಲೀಸರೂ ನಮ್ಮ ಮೇಲೆ ದೌರ್ಜನ್ಯ ನಡೆಸಿದರು. ಮನಬಂದಂತೆ ಎಳೆದಾಡಿದರು. ಇದರಿಂದ ಭುಜ, ಕೈ ಹಾಗೂ ಕುತ್ತಿಗೆಗೆ ಗಾಯಗಳಾಗಿವೆ’ ಎಂದು ಆರೋಪಿಸಿದರು.

‘ರೈತರ ಬದುಕೆಲ್ಲವೂ ಕೊಚ್ಚಿ ಹೋಗಿದೆ. ಮುಖ್ಯಮಂತ್ರಿ ಕೂಡಲೇ ಬೆಳೆ ಹಾನಿ ಪರಿಹಾರ ಘೋಷಿಸಬೇಕು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಬೀದಿಗೆ ಬಿದ್ದಿರುವ ರೈತರಿಗೆ ಹೊಸ ಬದುಕು ಕಟ್ಟಿಕೊಡಲು ಕ್ರಮ ಕೈಗೊಂಡಿಲ್ಲ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ಉಡಾಫೆಯಿಂದ ಮಾತನಾಡುತ್ತಾರೆ’ ಎಂದು ಚೂನಪ್ಪ ಪೂಜಾರಿ ಟೀಕಿಸಿದರು.

ತಮ್ಮನ್ನು ವಶಕ್ಕೆ ಪಡೆದು ಇರಿಸಲಾಗಿದ್ದ ಎಪಿಎಂಸಿ ಠಾಣೆಯಲ್ಲೂ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೂ ಮುನ್ನ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ರೈತ ಮುಖಂಡರ ಇನ್ನೊಂದು ಗುಂಪು, ಕೂಡಲೇ ಬೆಳೆ ಹಾನಿ ಪರಿಹಾರ ನೀಡುವಂತೆ ಆಗ್ರಹಿಸಿತು. ಪರಿಹಾರಕ್ಕಾಗಿ ಘೋಷಣೆ ಕೂಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.