
ಮೂಡಲಗಿ: ‘ರೈತರು ಕಬ್ಬಿನ ಬೆಲೆಗಾಗಿ ಕಳೆದ ಆರು ದಿನಗಳಿಂದ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದರೂ ಮುಖ್ಯಮಂತ್ರಿಗಳು, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸುತ್ತಿಲ್ಲ. ಕಾಂಗ್ರೆಸ್ ಲಜ್ಜೆಗೆಟ್ಟ ಸರ್ಕಾರವಾಗಿದೆ’ ಎಂದು ರಾಜ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಕಬ್ಬಿನ ಬೆಲೆ ನಿಗದಿಗಾಗಿ ಆಗ್ರಹಿಸಿ ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಕಳೆದ ಆರು ದಿನಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ಮಂಗಳವಾರ ಭಾಗವಹಿಸಿ, ‘ರೈತರ ಹೋರಾಟವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ, ಕೂಡಲೇ ದರ ಘೋಷಿಸಬೇಕು. ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು’ ಎಂದರು.
‘ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್‌ಆರ್‌ಪಿಯು ಇಡೀ ದೇಶಕ್ಕೆ ಒಂದೇ ಇದ್ದು, ಮಹಾರಾಷ್ಟ್ರದಲ್ಲಿ ಕಬ್ಬಿಗೆ ₹3,400 ದರ ಕೊಡುತ್ತಿದ್ದಾಗ ರಾಜ್ಯ ಸರ್ಕಾರಕ್ಕೆ ₹3,400 ಬೆಲೆ ಕೊಡಲು ಏನು ತೊಂದೆ?, ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವ ಮುಂಚೆ ಸರ್ಕಾರವು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮತ್ತು ರೈತರನ್ನು ಸೇರಿಸಿ ನ್ಯಾಯ ಸಮ್ಮತವಾದ ದರ ನಿಗದಿ ಮಾಡಬೇಕಾಗಿತ್ತು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂಥ ಸಮಸ್ಯೆಗಳು ಉದ್ಭವಿಸಿರಲಿಲ್ಲ’ ಎಂದರು.
‘ಗುರ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಭುಗಿಲೆದ್ದಿರುವ ರೈತರ ಹೋರಾಟ ಬೆಳಗಾವಿ, ಬಾಲಗಕೋಟ, ವಿಜಯಪುರ ಜಿಲ್ಲೆಯಾದ್ಯಂತೆ ಹಬ್ಬಿದೆ. ಸ್ವಾಭಿಮಾನಿ ರೈತರು ಬೀದಿಗೆ ಇಳಿದು ಪ್ರತಿಭಟನೆಯನ್ನು ಮಾಡುತಿದ್ದು ಸಕ್ಕರೆ ಸಚಿವರು, ಉಸ್ತುವಾರಿ ಸಚಿವರು ಎಲ್ಲಿ ಇದ್ದಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ದರ ನಿಗದಿಯಾಗುವವರೆಗೆ ರೈತರೊಂದಿಗೆ ಇರುವೆ. ಬುಧವಾರ ನನ್ನ ಹುಟ್ಟು ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿಕೊಳ್ಳುವ ಬದಲು ರೈತರೊಂದಿಗೆ ಗುರ್ಲಾಪುರದಲ್ಲಿ ಆಚರಿಸಿಕೊಳ್ಳುವೆ’ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ರೈತರ ಕೂಗು ಯಾರಿಗೆ ಮುಟ್ಟಿಸಬೇಕು ಅವರಿಗೆ ಮುಟ್ಟಿಸುವ ಸಲುವಾಗಿ ಇಲ್ಲಿ ಬಂದಿದ್ದೇವೆ. ಯಾವುದೇ ರಾಜಕೀಯ ಮಾಡಲು ಬಂದಿಲ್ಲ. ರಾಜ್ಯ ಮತ್ತು ಕೇಂದ್ರಕ್ಕೂ ರೈತರ ಸಮಸ್ಯೆ ಬಗ್ಗೆ ಗಮನಸೆಳೆಯುತ್ತೇವೆ’ ಎಂದು ತಿಳಿಸಿದರು.
ಮಾಜಿ ಶಾಸಕ ಪಿ. ರಾಜೀವ, ‘ರೈತರ ಬೇಡಿಕೆಯು ನ್ಯಾಯಯುತವಾಗಿದ್ದು, ರೈತರ ಪರವಾಗಿ ನಾನು ಕೊನೆಯವರೆಗೂ ನಿಲ್ಲುತ್ತೇನೆ’ ಎಂದರು.
ಶಾಸಕ ದುರ್ಯೋಧನ ಐಹೋಳಿ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ವಿವಿಧೆಡೆಯಿಂದ ಬಂದಿದ್ದ ರಾಜಕೀಯ ಮುಂಡರು, ಜನಪ್ರತಿನಿಧಿಗಳು ಇದ್ದರು.
ರೈತರೊಂದಿಗೆ ರಾತ್ರಿ ಇರಲು ವಿಜಯೇಂದ್ರ ನಿರ್ಧಾರ
ರೈತರು ಬೇಡಿಕೆ ಇಟ್ಟಿರುವ ಬೆಲೆಯನ್ನು ಮಂಗಳವಾರ ಸಂಜೆ ಹೊತ್ತಿಗೆ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಕ್ಕರೆ ಸಚಿವರಿಗೆ ಬೆಳಿಗ್ಗೆ ಗಡುವು ನೀಡಿದ್ದರು. ರೈತ ಮುಖಂಡರು ಸೂಚಿಸಿದಂತೆ ಸಂಜೆ ವರೆಗೆ ಉಳಿದುಕೊಂಡರು. ಸಂಜೆಯಾದರೂ ಸರ್ಕಾರವು ಸ್ಪಂದಿಸದ ಕಾರಣ ಮರಳಿ ಪ್ರತಿಭಟನಾ ಸ್ಥಳಕ್ಕೆ ಬಂದು ‘ಬೆಲೆ ನಿರ್ಧಾರವಾಗುವ ವರೆಗೆ ರೈತರೊಂದಿಗೆ ಉಳಿದು ಹೋರಾಟ ಮಾಡುವೆ’ ಎಂದರು. ‘ಈಗಾಗಲೇ ಮುಖ್ಯಮಂತ್ರಿ ಸಕ್ಕರೆ ಸಚಿವರ ಗಮನಕ್ಕೆ ಬಂದಿದೆ ನಾಳೆ ಒಂದು ದಿನ ಸರ್ಕಾರದ ಪ್ರತಿಕ್ರಿಯೆಗಾಗಿ ಗುರ್ಲಾಪುರದಲ್ಲಿ ಉಳಿಯುವೆ. ರೈತರ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ಇಲ್ಲಿಂದ ಹೋಗುವೆ’ ಎಂದು ಸ್ಪಷ್ಟಪಡಿಸಿದರು.
‘10 ಲಕ್ಷ ರೈತರೊಂದಿಗೆ ಹೆದ್ದಾರಿಯಲ್ಲಿ ಹೋರಾಟ’
‘ಡಿಸೆಂಬರದಲ್ಲಿ ಬೆಳಗಾವಿಯಲ್ಲಿ ಜರುಗುವ ಚಳಿಗಾಲ ಅಧಿವೇಶನದಲ್ಲಿ 10 ಲಕ್ಷ ರೈತರೊಂದಿಗೆ ಹೆದ್ದಾರಿಯಲ್ಲಿ ಹೋರಾಟಕ್ಕೆ ಕುಳಿತುಕೊಳ್ಳುತ್ತೇವೆ. ಬಿ.ವೈ. ವಿಜೆಯೇಂದ್ರ ಆದಿಯಾಗಿ ಬಿಜೆಪಿಯ ಎಲ್ಲ ಶಾಸಕರು ಸುವರ್ಣ ವಿಧಾನಸೌಧದ ಕಟ್ಟೆ ಏರದೆ ನಮ್ಮೊಂದಿಗೆ ಕುಳಿತುಕೊಳ್ಳಬೇಕು. ಅಧಿವೇಶನದಲ್ಲಿ ಟನ್ ಕಬ್ಬಿಗೆ ₹5500 ದರ ಕೊಡಿಸುವ ಬಗ್ಗೆ ಮಾತನಾಡಬೇಕು’ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಹೇಳಿದರು. ₹3400 ದರ ಕೊಡುವವರೆಗೆ ಮುಷ್ಕರ ಬಿಡಲ್ಲ: ‘ಒಂದು ಟನ್ ಕಬ್ಬು ಬೆಳೆಯಲಿಕ್ಕೆ ರೈತರಿಗೆ ₹4600 ಖರ್ಚು ಇದ್ದು ಕಾರ್ಖಾನೆಯವರು ರೈತರ ಕಬ್ಬಿಗೆ ₹5500 ಕೊಡಬೇಕಾಗಿದ್ದರೂ ನಮ್ಮ ಬೇಡಿಕೆ ದರ ₹3500. ಮಧ್ಯಸ್ಥಿಕೆ ಮಾಡುತ್ತಿರುವ ಜಿಲ್ಲಾಧಿಕಾರಿ ಅವರಿಗೆ ಎರಡು ದಿನಗಳ ಹಿಂದೆ ರೈತರೆಲ್ಲರೂ ₹3400 ದರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರವು ಮತ್ತು ಸಕ್ಕರೆ ಕಾರ್ಖಾನೆಯವರು ₹3400 ದರ ಕೊಡುವವರೆಗೆ ಮುಷ್ಕರ ಬಿಡುವುದಿಲ್ಲ’ ಎಂದು ರೈತ ಮುಖಂಡ ಚೂಣಪ್ಪ ಪೂಜಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.