ADVERTISEMENT

ಸೋಯಾಬೀನ್ ದರ ಕುಸಿತ: ಹೆದ್ದಾರಿ ತಡೆ

ನೇಸರಗಿ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 15:53 IST
Last Updated 11 ಅಕ್ಟೋಬರ್ 2021, 15:53 IST
ಸೋಯಾಬೀನ್ ಬೆಲೆ ಕುಸಿತವಾಗಿರುವುದನ್ನು ಖಂಡಿಸಿ ನೇಸರಗಿ ಸಮೀಪದ ಬಾಚಿ–ರಾಯಚೂರು ಹೆದ್ದಾರಿಯಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು
ಸೋಯಾಬೀನ್ ಬೆಲೆ ಕುಸಿತವಾಗಿರುವುದನ್ನು ಖಂಡಿಸಿ ನೇಸರಗಿ ಸಮೀಪದ ಬಾಚಿ–ರಾಯಚೂರು ಹೆದ್ದಾರಿಯಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಸೋಯಾಬೀನ್ ದರ ದಿಢೀರ್‌ ಕುಸಿತ ಆಗಿರುವುದನ್ನು ಖಂಡಿಸಿ ಮತ್ತು ಕಳಪೆ ಗುಣಮಟ್ಟದ ಕ್ಯಾರೆಟ್ ಬಿತ್ತನೆ ಬೀಜ ಪೂರೈಸಿದ ಕಂಪನಿಯಿಂದ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳವರು ಬೈಲಹೊಂಗಲ ತಾಲ್ಲೂಕಿನ ನೇಸರಗಿ ಸಮೀಪದಲ್ಲಿ ಬಾಚಿ–ರಾಯಚೂರು ರಾಜ್ಯ ಹೆದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಸೋಯಾಬೀನ್‌ ಬೆಂಬಲ ಬೆಲೆಯನ್ನು ಕನಿಷ್ಠ ₹ 10ಸಾವಿರಕ್ಕೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರವು ರೂಪಿಸಿರುವ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತ ವಿರೋಧಿ ನೀತಿಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅಗತ್ಯ ವಸ್ತುಗಳು ಮತ್ತು ‍ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಇಳಿಸಬೇಕು. ಕಳಪೆ ಕ್ಯಾರೆಟ್‌ ಬೀಜಗಳನ್ನು ವಿತರಣೆ ಮಾಡಿದ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳಪೆ ಬಿತ್ತನೆ ಬೀಜದಿಂದ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ ಕನಿಷ್ಠ ₹ 80ಸಾವಿರ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಬಾಬಾಹೇಬ ಪಾಟೀಲ ಮಾತನಾಡಿ, ‘ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆಗಳಲ್ಲಿ ರೈತರು ನಿರಂತರವಾಗಿ ಒಂದಿಲ್ಲೊಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದಾರೆ. ಆದರೂ ಸರ್ಕಾರ ಸ್ಪಂದಿಸದೆ ಇರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸೋಯಾಅವರೆ ಬೆಲೆಯನ್ನು ದಿಢೀರ್ ಇಳಿಸುವ ಮೂಲಕ ರೈತರ ಮೇಲೆ ಬರೆ ಎಳೆಯಲಾಗಿದೆ. ಅಲ್ಲದೇ ಡಿಎಪಿ ಗೊಬ್ಬರದ ಕೊರತೆಯೂ ಕಂಡುಬರುತ್ತಿದೆ. ಈ ಸಮಸ್ಯೆಗಳನ್ನು ಕೂಡಲೇ ನಿವಾರಿಸಬೇಕು. ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಜನರ ಮೇಲೆ ಬರೆ ಎರೆಯುವುದನ್ನು ನಿಲ್ಲಿಸಬೇಕು. ಶಾಂತಿಯುತ ಹೋರಾಟಕ್ಕೆ ಸ್ಪಂದನೆ ದೊರೆಯದಿದ್ದಲ್ಲಿ, ಮುಂಬರುವ ದಿನಗಳಲ್ಲಿ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ, ‘ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅನ್ಯಾಯವಾದಾಗ ಅದನ್ನು ಪ್ರಶ್ನಿಸುವುದು ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಹಕ್ಕಾಗಿದೆ. ಸಂಪೂರ್ಣ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಲು ರೈತರು ಹಾಗೂ ಸಮಾಜದ ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ತಿಳಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕ ಚೂನಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ಕಾಂಗ್ರೆಸ್ ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ನೇಸರಗಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಮುಖಂಡರಾದ ಬಸವರಾಜ ಚಿಕ್ಕನಗೌಡರ, ಮಹಾಂತೇಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.