ADVERTISEMENT

ಬೆಳಗಾವಿ: ಸಕಾಲಕ್ಕೆ ಸಾಲ ಮರುಪಾವತಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 13:34 IST
Last Updated 4 ಸೆಪ್ಟೆಂಬರ್ 2021, 13:34 IST
ಪರಮಾನಂದವಾಡಿ ಸಮೀಪದ ಶಿರಗೂರ ಗ್ರಾಮದಲ್ಲಿ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದವರು ಸದಸ್ಯರಿಗೆ ಸಾಲ ವಿತರಿಸಿದರು
ಪರಮಾನಂದವಾಡಿ ಸಮೀಪದ ಶಿರಗೂರ ಗ್ರಾಮದಲ್ಲಿ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದವರು ಸದಸ್ಯರಿಗೆ ಸಾಲ ವಿತರಿಸಿದರು   

ಪರಮಾನಂದವಾಡಿ: ‘ರೈತರು ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಅವಧಿ ಪೂರ್ವದಲ್ಲಿ ಪಾವತಿಸಬೇಕು. ಇಲ್ಲವಾದರೆ ವೈಯಕ್ತಿಕವಾಗಿ ಏನೂ ಪ್ರಯೋಜನವಿಲ್ಲ. ಸಂಘದ ಆರ್ಥಿಕ ಬೆಳವಣಿಗೆಯಲ್ಲಿಯೂ ಹಿನ್ನಡೆಯಾಗುತ್ತದೆ’ ಎಂದು ಬಿಡಿಸಿಸಿ ಬ್ಯಾಂಕ್‌ ರಾಯಬಾಗ ತಾಲ್ಲೂಕು ನಿಯಂತ್ರಣಾಧಿಕಾರಿ ಬಿ.ಎಸ್. ರಬಗಲ್ ಹೇಳಿದರು.

ಸಮೀಪದ ಶಿರಗೂರ ಗ್ರಾಮದಲ್ಲಿ ನಡೆದ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಾರಂಭೋತ್ಸವದಲ್ಲಿ 171 ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 61.60 ಲಕ್ಷ ಬೆಳೆ ಸಾಲ ವಿತರಿಸಿ ಅವರು ಮಾತನಾಡಿದರು.

‘ಟ್ರ್ಯಾಕ್ಟರ್ ಖರೀದಿ, ಹೈನುಗಾರಿಕೆಗೆ, ಸ್ವಸಾಯ ಸಂಘಗಳಿಗೆ, ರೈತರ ಜಮೀನಿಗೆ ಪೈಪ್‌ಲೈನ್ ಅಳವಡಿಕೆಗೆ, ಕಾರು ಖರೀದಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ನಮ್ಮ ಸಂಘದಿಂದ ಸಾಲ ವಿತರಿಸುತ್ತೇವೆ. ಇದನ್ನು ಬಳಸಿಕೊಳ್ಳಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಕಲ್ಮೇಶ್ವರ ಆಶ್ರಮದ ಪೀಠಾಧ್ಯಕ್ಷ ಅಭಿನವ ಕಲ್ಮೇಶ್ವರ ಮಹಾರಾಜ, ‘ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಜೊತೆಯಲ್ಲಿ ಇಂತಹ ಸಂಘಗಳನ್ನು ಉಳಿಸಿ–ಬೆಳೆಸಬೇಕು. ಗ್ರಾಮೀಣ ಜನರ ಜೀವನ ಸುಧಾರಣೆಗೆ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಬೇಕು. ಅವರ ನೋವು ಅರಿತು ಅನುಕೂಲ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಪ್ಪಾಸಾಹೇಬ ಕುಲಗೂಡೆ, ಕುಡಚಿ ಶಾಖೆಯ ನಿರೀಕ್ಷಕ ಪಿ.ಬಿ. ರಾಯಣ್ಣವರ, ಎಸ್.ಎಸ್ ನಂದಗಾವ, ಉಪ ಲೆಕ್ಕಪರಿಶೋಧಕ ಎನ್.ಕೆ. ಕರೆನ್ನವರ್, ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಬಾವಿ, ಉಪಾಧ್ಯಕ್ಷ ರಾಜು ಮೋರ್ಡಿ, ಬಸನಗೌಡ ಆಸಂಗಿ, ಅಶೋಕ ಗುಡೋಡಗಿ, ಅಶೋಕ ಬಾವಿ, ನೀಲಪ್ಪ ಕಾಂಬಳೆ, ಪ್ರದೀಪ ಬಾವಿ, ಈಶ್ವರ ಮೋರ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.