ADVERTISEMENT

ಕೊರೊನಾ ಯೋಧರ ಸೇವೆ ಮರೆಯಲಾಗದು: ಶಾಸಕ ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 13:59 IST
Last Updated 25 ಅಕ್ಟೋಬರ್ 2021, 13:59 IST
ಬೆಳಗಾವಿಯ ಮಹಾವೀರ ನಗರದ ಹಿಂದವಾಡಿಯಲ್ಲಿ ಕೊರೊನಾ ಸೇನಾನಿಗಳನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ನಗರಪಾಲಿಕೆ ಸದಸ್ಯ ಮಂಗೇಶ ಪವಾರ ಭಾನುವಾರ ಸತ್ಕರಿಸಿದರು
ಬೆಳಗಾವಿಯ ಮಹಾವೀರ ನಗರದ ಹಿಂದವಾಡಿಯಲ್ಲಿ ಕೊರೊನಾ ಸೇನಾನಿಗಳನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ನಗರಪಾಲಿಕೆ ಸದಸ್ಯ ಮಂಗೇಶ ಪವಾರ ಭಾನುವಾರ ಸತ್ಕರಿಸಿದರು   

ಬೆಳಗಾವಿ: ‘ದಕ್ಷಿಣ ಮತ ಕ್ಷೇತ್ರದಲ್ಲಿ 4 ಲಕ್ಷ ಮಂದಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದ ಹಿಂದವಾಡಿಯ ಮಹಾವೀರ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಮುಂಚೂಣಿ ಸೇನಾನಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.

‘ಕೋವಿಡ್ ಇಡೀ ಜಗತ್ತನ್ನು ನಡುಗಿಸಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸರ್ಕಾರಿ ವೈದ್ಯರು, ನರ್ಸ್‌ಗಳು ಮೊದಲಾದ ವೈದ್ಯಕೀಯ ಸಿಬ್ಬಂದಿ ನಿರ್ವಹಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು. ಎಲ್ಲರೂ ನಮ್ಮವರೆಂದು ತಿಳಿದು ಮಾಡಿದ ಸೇವೆಯು ಮೆಚ್ಚುವಂಥದು’ ಎಂದರು.

ADVERTISEMENT

‘ಖಾಸಗಿ ಆಸ್ಪತ್ರೆಗಳವರು ಕ್ಲಿನಿಕ್‌ಗಳನ್ನು ಬಂದ್ ಮಾಡಿದ್ದ ವೇಳೆ ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಧೈರ್ಯವಾಗಿ ಕೆಲಸ ನಿರ್ವಹಿಸಿದರು. ಜನರ ಆರೈಕೆ ಮಾಡಿದರು. ಮನೆಗಳಿಗೆ ತೆರಳಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿದರು. ಇದನ್ನು ಮರೆಯಲಾಗದು’ ಎಂದು ಹೇಳಿದರು.

ಟಿಎಚ್‌ಒ ಡಾ.ಎಸ್.ಸಿ. ಮಾಸ್ತಿಹೊಳಿ ಮಾತನಾಡಿ, ‘ಶಾಸಕರ ಸಹಕಾರದಿಂದ ಕ್ಷೇತ್ರದಲ್ಲಿ ಹಂತ ಹಂತದಾಗಿ ದೊಡ್ಡ ಪ್ರಮಾಣದಲ್ಲಿ ಲಸಿಕಾ ಶಿಬಿರ ನಡೆಸಲಾಯಿತು. ಏಕಕಾಲಕ್ಕೆ 26ಸಾವಿರ ಮಂದಿಗೆ ಡೋಸ್ ಕೊಡಲಾಗಿತ್ತು. ಯಾರು ಪಡೆದಿಲ್ಲವೋ ಅವರು ಲಸಿಕೆ ತೆಗೆದುಕೊಳ್ಳಬೇಕು. 2ನೇ ಡೋಸ್ ನೀಡುವುದಕ್ಕೆ ಸಿಬ್ಬಂದಿ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ 18 ವರ್ಷದೊಳಗಿನವರಿಗೂ ಕೋವಿಡ್ ನಿರೋಧಕ ಲಸಿಕೆ ನೀಡಲು ಸರ್ಕಾರ ಕ್ರಮ ವಹಿಸಿದೆ. 8, 9 ಹಾಗೂ 10ನೇ ತರಗತಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವವರಿಗೆ ಮೊದಲ ಹಂತದಲ್ಲಿ ಲಸಿಕಾ ಅಭಿಯಾನ ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಸರ್ಕಾರಿ ವೈದ್ಯರು, ಶುಶ್ರೂಷಕರು, ಕ್ಷೇತ್ರ ಆರೋಗ್ಯ ಸಹಾಯಕರು, ಪ್ರಯೋಗಾಲಯ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ 600 ಮಂದಿಯನ್ನು ಸತ್ಕರಿಸಲಾಯಿತು.

ನಗರಪಾಲಿಕೆ ಸದಸ್ಯ ಮಂಗೇಶ ಪವಾರ, ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್. ರೊಟ್ಟಿ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ಸುಖಸಾರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.