ADVERTISEMENT

ಜ್ವರದ ನಡುವೆಯೂ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಪ್ರಚಾರ!

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 10:10 IST
Last Updated 15 ಏಪ್ರಿಲ್ 2021, 10:10 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ವರ ಹಾಗೂ ಸುಸ್ತು ಮೊದಲಾದ ಸಮಸ್ಯೆಗಳ ನಡುವೆಯೂ ಪ್ರಚಾರ ನಡೆಸಿ, ಮತ ಬೇಟೆ ನಡೆಸಿದರು.

ಬುಧವಾರದಿಂದಲೂ ಜ್ವರದಿಂದ ಬಳಲುತ್ತಿರುವ ಅವರು, ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿ ಪ್ರಚಾರ ಮುಂದುವರಿಸಿದರು. ಗುರುವಾರ ಬೆಳಿಗ್ಗೆ ಇಲ್ಲಿನ ನಾಗನೂರು ರುದ್ರಾಕ್ಷಿಮಠ ಮತ್ತು ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಅಲ್ಲಿನ ಶ್ರೀಗಳಿಂದ ಆಶೀರ್ವಾದ ಪಡೆದರು. ಹುಕ್ಕೇರಿ ಹಿರೇಮಠದಲ್ಲಿ ಕೆಲವು ಪ್ರಮುಖ ಸ್ವಾಮೀಜಿಗಳೊಂದಿಗೆ ಗೋಪ್ಯ ಸಭೆ ನಡೆಸಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು.

ಬಳಿಕ ಎಸ್‌ಪಿಎಂ ರಸ್ತೆಯಲ್ಲಿರುವ ಶಿವಾಜಿ ಉದ್ಯಾನಕ್ಕೆ ಭೇಟಿ ನೀಡಿ, ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ, ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಿದರು. ಮುಕ್ಕಾಲು ತಾಸಿನ ನಂತರ ಬಳಲಿಕೆಯಿಂದಾಗಿ ರೋಡ್ ಷೋ ಮೊಟಕುಗೊಳಿಸಿ, ತಾವು ತಂಗಿದ್ದ ಯುಕೆ–27 ಹೋಟೆಲ್‌ಗೆ ತೆರಳಿ ವಿಶ್ರಾಂತಿ ಪಡೆದರು.

ADVERTISEMENT

ಇದಕ್ಕೂ ಮುನ್ನ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ‘ಈಗ ಆರೋಗ್ಯವಾಗಿದ್ದೇನೆ. ಗುರುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತದೆ’ ಎಂದು ಕೇಳುತ್ತಾ ಕೈಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.