ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಸರ್ಕಾರಿ ಉರ್ದು ಶಾಲೆಯಲ್ಲಿನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು
ಸಂಕೇಶ್ವರ: ಮಹಾರಾಷ್ಟ್ರದಲ್ಲಿ ವರುಣ ಅಬ್ಬರದ ಪರಿಣಾಮ ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದೆ. ಇಲ್ಲಿನ ಮಠ ಗಲ್ಲಿ, ನದಿ ಗಲ್ಲಿ, ಜನತಾ ಪ್ಲಾಟ್‌ನ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಅತಂತ್ರರಾಗಿ, ಜನರು ಆಶ್ರಯಕ್ಕಾಗಿ ಕಾಳಜಿ ಕೇಂದ್ರದಲ್ಲಿ ವಾಸವಿದ್ದಾರೆ. ಅಲ್ಲಿ ಅವರಿಗೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಶುರುವಾಗಿದೆ.
ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಲ್ಲಿ ಪ್ರವಾಹವಾದಾಗ, ಸಂಕೇಶ್ವರದ ಬಹುತೇಕ ಮನೆಗಳಿಗೆ ನೀರು ನುಗ್ಗುತ್ತದೆ. ಈ ವರ್ಷವೂ ಅದು ಅದು ಮುಂದುವರಿದಿದ್ದು, ಕೆಲವರು ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. 35ಕ್ಕೂ ಅಧಿಕ ಕುಟುಂಬಗಳಿಗೆ ಸರ್ಕಾರಿ ಉರ್ದು ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಆದರೆ, ಈ ಶಾಲೆ ಮೈದಾನದಲ್ಲಿ ಹೇರಳವಾಗಿ ಕಸ ಬೆಳೆದಿದೆ. ಎಲ್ಲೆಂದರಲ್ಲಿ ಮಳೆನೀರು ನಿಂತಿದ್ದು, ಕೆಸರುಮಯ ವಾತಾವರಣವಿದೆ. ಸೊಳ್ಳೆಗಳ ಕಾಟವೂ ಇದೆ. ಅನಾರೋಗ್ಯ ಸಮಸ್ಯೆ ಕಾಡುವ ಭೀತಿ ಜನರಲ್ಲಿ ಮೂಡಿದೆ.
‘ಪ್ರವಾಹ ಬಂದಿದ್ದಕ್ಕ ನಮಗ್ ಇರಾಕ್ ಜಾಗ ಇಲ್ರಿ. ಹಂಗಾಗಿ ಎಷ್ಟಾರ ಸೌಕರ್ಯ ಇರಲೆಂದು ಇಲ್ಲಿಗಿ ಬಂದ ಅದೇವ್ರಿ. ಇಲ್ಲಿಯೂ ಸ್ವಚ್ಛತಾ ಇಲ್ಲ. ನಮ್ಮ ಕಷ್ಟಾ ಯಾರ ಕೇಳಾವ್ರ ಬಿಡ್ರಿ’ ಎಂದು ಸಂತ್ರಸ್ತರು ಸಂಕಷ್ಟ ತೋಡಿಕೊಂಡರು.
ಬಾಡಿಗೆ ಮನೆಗೂ ನೀರು ನುಗೈತ್ರಿ: ‘2019ರಲ್ಲಿ ನಮ್ಮ ಮನಿ ಬಿದ್ದೈತ್ರಿ. ಇನ್ನೂ ಅದನ್ನ ಕಟ್ಟಿಲ್ರಿ. ಬಾಡಿಗೆ ಮನ್ಯಾಗ ಅದೇವ್ರಿ. ಈಗ ಆ ಮನೆಗೂ ನೀರು ನುಗೈತ್ರಿ. ಹೊಳಿ(ನದಿ) ತುಂಬಿ ಹರ್‍ಯಾಕ ಶುರುಮಾಡಿದ್ರ ನಮಗ್ ಕಾಳಜಿ ಕೇಂದ್ರನ ಗತಿರಿ. ಮನ್ಯಾಗಿನ ಒಂದಿಷ್ಟ ವಸ್ತು ಬೇರೆದಾವ್ರ ಮನ್ಯಾಗ ಇಟ್ಟೇವ್ರಿ. ಒಂದಿಷ್ಟು ಇಲ್ಲಿಗೇ ತಗೊಂಡು ಬಂದೇವ್ರಿ’ ಎಂದು ಬಾಲಚಂದ್ರ ಕದಂ ಹೇಳಿದರು.
‘ಮಳೆಯಿಂದ ನಮ್ಮ ಮನೆಗೆ ಹಿರಣ್ಯಕೇಶಿ ನದಿ ನೀರು ಬಂದಿದ್ದರಿಂದ ಐದು ಮಂದಿ ಕಾಳಜಿ ಕೇಂದ್ರಕ್ಕೆ ಬಂದು ವಾಸವಿದ್ದೇವೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುತ್ತಿದ್ದಾರೆ’ ಎಂದು ಪ್ರೇಮಸಿಂಗ್ ಕದಂ ತಿಳಿಸಿದರು.
ಸಂತ್ರಸ್ತರಿಗೆ ಉತ್ತಮ ಊಟ, ಉಪಾಹಾರ ಕೊಡುತ್ತಿದ್ದೇವೆ. ಸ್ವಚ್ಛತೆ ಜತೆಗೆ ಫಾಗಿಂಗ್ ಮಾಡುತ್ತೇವೆ. ಆರೋಗ್ಯ ದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತೇವೆ-ಪ್ರಕಾಶ ಮಠದ, ಮುಖ್ಯಾಧಿಕಾರಿ, ಸಂಕೇಶ್ವರ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.