ADVERTISEMENT

ನೆರೆ: ಕೇಂದ್ರ ತಂಡದಿಂದ ಮತ್ತೊಮ್ಮೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 12:43 IST
Last Updated 25 ಆಗಸ್ಟ್ 2019, 12:43 IST
   

ಶೇಡಬಾಳ (ಬೆಳಗಾವಿ ಜಿಲ್ಲೆ): ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರದಿಂದ ಮತ್ತೊಂದು ತಂಡ ಬರಲಿದೆ ಎಂದು ಕೇಂದ್ರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಪ್ರಕಾಶ್ ತಿಳಿಸಿದರು.

ಚಿಕ್ಕೋಡಿ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ನೆರೆಯಿಂದ ಹಾನಿಯಾಗಿರುವ ಪ್ರದೇಶಗಳನ್ನು ವೀಕ್ಷಿಸಿ ಕಾಗವಾಡ ತಾಲ್ಲೂಕಿನ ಶೇಡಬಾಳ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಬಹಳಷ್ಟು ಹಾನಿಯಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರ ಹೇಳಿದೆ. ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ಕೃಷ್ಣಾ ನದಿ ಪಾತ್ರದಲ್ಲಿ ಬಹಳ ಹಾನಿಯಾಗಿದೆ. ವಿಶೇಷವಾಗಿ ಕಬ್ಬಿನ ಬೆಳೆ ನೀರು ಪಾಲಾಗಿದೆ. ಗಂಭೀರ ಪರಿಸ್ಥಿತಿ ಇದೆ. ಸಹಜ ಸ್ಥಿತಿಗೆ ಬರಲು ಇನ್ನೂ ಬಹಳ ಸಮಯ ಬೇಕಾಗುತ್ತದೆ ಎಂದರು.

ADVERTISEMENT

ಪ್ರವಾಹಕ್ಕೆ ಸಿಲುಕಿದವರ‌ ರಕ್ಷಣೆ, ಪರಿಹಾರ ಕಾರ್ಯ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.

ಪರಿಹಾರ ಕೋರಿ ರಾಜ್ಯ ಸರ್ಕಾರದಿಂದ ಮನವಿ ಸ್ವೀಕರಿಸಬೇಕಾಗಿದೆ. ಮುಖ್ಯಮಂತ್ರಿಯಿಂದ ಆ.26ರಂದು ಮನವಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಅದನ್ನು ಆಧರಿಸಿ ಪರಿಶೀಲನೆಗಾಗಿ ಶೀಘ್ರದಲ್ಲಿಯೇ ಮತ್ತೊಂದು ತಂಡ ಬಂದು ಪರಿಶೀಲನೆ ನಡೆಸಲಿದೆ. ಬಳಿಕ ಕೇಂದ್ರ ಸರ್ಕಾರಕ್ಕೆ ಅಂತಿಮವಾಗಿ ಶಿಫಾರಸು ಮಾಡಲಾಗುವುದು. ರಾಜ್ಯ ಸರ್ಕಾರ ನೀಡುವ ಅಂಕಿ- ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಶಿಫಾರಸು ಮಾಡಲಾಗುವುದು. ತ್ವರಿತವಾಗಿ ಪರಿಹಾರ ಕೊಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ‌ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.