ರಾಮದುರ್ಗ: ತಾಲ್ಲೂಕಿನ ಕಟಕೋಳ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖೊಟ್ಟಿ ಸಹಿ ಮಾಡಿ, ಸದಸ್ಯರೊಬ್ಬರು ₹31.84 ಲಕ್ಷ ದೋಚಿದ್ದಾರೆ.
ಶ್ರೀಕಾಂತ ಫಕ್ಕೀರಪ್ಪ ಕೊರವರ ವಂಚನೆ ಆರೋಪಿ.
‘ಶ್ರೀಕಾಂತ ಅವರು ಗ್ರಾಮ ಪಂಚಾಯಿತಿಗೆ ಸೇರಿದ ₹31.84 ಲಕ್ಷ ಮೊತ್ತವನ್ನು ಖೊಟ್ಟಿ ಸಹಿ ಮಾಡಿ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಕಟಕೋಳ ಶಾಖೆಯಿಂದ ತೆಗೆದುಕೊಂಡಿದ್ದಾರೆ. ಡೇಟಾ ಎಂಟ್ರಿ ಆಪರೇಟರ್ ಶ್ರೀಶೈಲ ಮುಗಳಿ, ವಾಟರ್‌ಮನ್ ಹನಮಂತ ಭಜಂತ್ರಿ ಮತ್ತು ಬ್ಯಾಂಕ್ ವ್ಯವಸ್ಥಾಪಕರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ’ ಎಂದು ಪಿಡಿಒ ಮಲ್ಲಿಕಾರ್ಜುನ ಬೈಲವಾಡ ಅವರು, ಕಟಕೋಳ ಪೊಲೀಸ್ ಠಾಣೆಯಲ್ಲಿ ಜುಲೈ 22ರಂದು ದೂರು ದಾಖಲಿಸಿದ್ದಾರೆ.
2024ರ ಸೆಪ್ಟೆಂಬರ್ 17ರಂದು ಹನುಮಂತ ಅವರು, ಯಾರಿಗೂ ಗೊತ್ತಾಗದಂತೆ ಬ್ಯಾಂಕ್‍ನಿಂದ 12 ಚೆಕ್ ಪಡೆದಿದ್ದರು. ಅವುಗಳ ಮೂಲಕ ಸೆ.18ರಿಂದ ಅ.7ರವರೆಗೆ ಹಣ ತೆಗೆದುಕೊಳ್ಳಲಾಗಿದೆ. ಇದು ಗ್ರಾ.ಪಂ ಅಧ್ಯಕ್ಷರು ಮತ್ತು ಪಿಡಿಒ ಜಂಟಿ ನಿರ್ವಹಣೆ ಖಾತೆಯಾದರೂ, ಬ್ಯಾಂಕ್ ಸಿಬ್ಬಂದಿ ಪರಿಶೀಲಿಸದೆ ಹಣ ಕೊಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
2025ರ ಏಪ್ರಿಲ್ ಮೊದಲ ವಾರದಲ್ಲಿ ರಾಮದುರ್ಗ ತಾಲ್ಲೂಕು ಪಂಚಾಯಿತಿಯಿಂದ ಮಾಹಿತಿ ನೀಡಬೇಕಿತ್ತು. ಆದರೆ, ಡೇಟಾ ಎಂಟ್ರಿ ಆಪರೇಟರ್ ಇಲ್ಲಸಲ್ಲದ ನೆಪ ಹೇಳಿ ನುಣಚಿಕೊಂಡಿದ್ದರು. ಬ್ಯಾಂಕ್‍ಗೆ ಹೋಗಿ ಪಾಸ್‍ಬುಕ್‌ನ ಸ್ಟೇಟ್‌ಮೆಂಟ್ ಪ್ರಿಂಟ್ ಮಾಡಿಸಿಕೊಂಡು ಬರಲು ನಿರಾಕರಿಸಿದ್ದರು. ಅಂತಿಮವಾಗಿ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಅಕ್ರಮ ಗೊತ್ತಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಏಪ್ರಿಲ್ 25ರಂದು ಸಭೆ ಸೇರಿ, ಶ್ರೀಕಾಂತ ಕರೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ‘ಇದರಲ್ಲಿ ನಾನೊಬ್ಬನೇ ಆರೋಪಿ ಅಲ್ಲ. ಕೆಲ ಸದಸ್ಯರು ಶಾಮೀಲಾಗಿದ್ದಾರೆ. ಅವರಿಂದಲೂ ಹಣ ವಸೂಲಿ ಮಾಡಬೇಕು’ ಎಂದು ಹೇಳಿದ್ದಾರೆ. ಈವರೆಗೆ ₹26.90 ಲಕ್ಷ ಮರಳಿಸಿದ್ದಾರೆ. ಬಾಕಿ ಹಣ ನೀಡದಿದ್ದಾಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.