ಪ್ರಜಾವಾಣಿ ವಾರ್ತೆ
ರಾಮದುರ್ಗ: ‘ರಾಜ್ಯ ಸರ್ಕಾರ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ರೈತರು ಮತ್ತು ದುಡಿಯುವ ಜನ ಸೋಮಾರಿಗಳು ಆಗುತ್ತಿದ್ದಾರೆ. ಇದರಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಬಾಳೆಹೊನ್ನೂರಿನ ಜಗದ್ಗುರು ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಚಿಪ್ಪಲಕಟ್ಟಿಯಲ್ಲಿ ಸೋಮವಾರ ರಂಭಾಪುರಿ ಪೀಠದ ಶಾಖಾಮಠದ ಕಲ್ಮೇಶ್ವರ ಶ್ರೀಗಳ ಷಷ್ಠ್ಯಬ್ದಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಿಟ್ಟಿ ಭಾಗ್ಯಗಳ ಬದಲಿಗೆ ಜನರಲ್ಲಿ ದುಡಿದು ತಿನ್ನುವ ಹಂಬಲ ಹೆಚ್ಚಿಸುವ ಪ್ರೋತ್ಸಾಹವನ್ನು ನೀಡಬೇಕು. ಪುಕ್ಕಟ್ಟೆ ಆಸೆಗೆ ಜನ ಸೋಮಾರಿತನದಲ್ಲಿ ಮುಳುಗುತ್ತಿದ್ದಾರೆ’ ಎಂದರು.
ದೇಶದ ಪ್ರತಿಶತ 70 ಜನ ಕೃಷಿಕರು. ಅದರಲ್ಲಿ ಕೆಲವರು ಹೊಲ–ಗದ್ದೆಗಳನ್ನು ಮಾರಿ ಪಟ್ಟಣ ಸೇರುತ್ತಿದ್ದಾರೆ. ಉಳಿದವರು ಭೂಮಿಗೆ ರಸಾಯನಿಕ ಗೊಬ್ಬರ ಸುರಿದು ಭೂಮಿ ವಿಷಕಾರಿಯಾಗಿದೆ. ಇದರಲ್ಲಿ ಬೆಳೆಗಳನ್ನು ಸೇವಿಸಿದ ಜನರ ಆರೋಗ್ಯ ಹದಗೆಡುತ್ತಿದೆ. ರೈತರು ಹೆಚ್ಚಿನ ಇಳುವರಿಗಾಗಿ ರಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ರಂಭಾಪುರಿ ಶ್ರೀಗಳು ಹೊರಡಿಸಿದ ಧರ್ಮದಿಂದಲೇ ದೇಶಕ್ಕೆ ಶಾಂತಿ ಎಂಬ ಸಂದೇಶದಿಂದ ಜಾತಿಗಳಲ್ಲಿಯ ಒಳಪಂಗಡಗಳು ಮತ್ತೊಮ್ಮೆ ಒಂದಾಗುತ್ತಿವೆ. ಪಂಚಮಸಾಲಿ ಸಮಾಜ ಧರ್ಮ ರಕ್ಷಣೆಗೆ ಪಣ ತೊಟ್ಟಿದೆ. ಇದಕ್ಕೆ ರಂಭಾಪುರಿ ಪೀಠದ ಬೆಂಬಲವಿದೆ’ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು. ಈ ಭಾಗದ 60 ಮಠಾಧೀಶರು, 60 ಸುಮಂಗಲೆಯರು, 60 ರೈತರು ಮತ್ತು 60 ಮಾಜಿ ಸೈನಿಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.