ಬೆಳಗಾವಿ: ‘ಅಂಗವಿಕಲರಿಗೆ ಉಚಿತವಾಗಿ ನಿವೇಶನ ನೀಡಲು ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಸೋಮವಾರ ಇಲ್ಲಿನ ಸಮರ್ಥನಂ ಅಂಗವಿಕಲ ಸಂಸ್ಥೆಯು ಹಮ್ಮಿಕೊಂಡಿದ್ದ ಕೊರೊನಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮಾಡಿಕೊಂಡ ಮನವಿಗೆ ತಕ್ಷಣ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ನಿವೇಶನ ನೀಡುವುದರ ಜೊತೆಗೆ ಮನೆ ಕಟ್ಟಿಸಿಕೊಡಲು ನನ್ನ ಶಾಸಕ ಅನುದಾನದಿಂದ ಆರ್ಥಿಕ ಸಹಾಯವನ್ನೂ ನೀಡುತ್ತೇನೆ’ ಎಂದು ಭರವಸೆ ನೀಡಿದರು.
‘ಸಮರ್ಥನಂ ಅಂಗವಿಕಲ ಸಂಸ್ಥೆಯು ದೃಷ್ಟಿಹೀನರ ಬದುಕಿಗೆ ಆಶಾಕಿರಣವಾಗಿದೆ. ಹಲವು ವರ್ಷಗಳಿಂದ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಿರತವಾಗಿದೆ’ ಎಂದು ಪ್ರಶಂಶಿಸಿದರು.
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ಕಣ್ಣಿಲ್ಲದಿದ್ದರೂ ಶಿಸ್ತುಬದ್ಧವಾಗಿ ಜೀವನ ನಡೆಸುತ್ತಿರುವ ಅವರನ್ನು ನೋಡಿ ಕಣ್ಣಿದ್ದವರು ಕಲಿಯಬೇಕಾಗಿದೆ’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಆತ್ಮ ನಿರ್ಭರ ಪಾಲಿಸಬೇಕು. ಸ್ವದೇಶಿ ವಸ್ತುಗಳನ್ನೇ ಬಳಸಬೇಕು’ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥ ಮಹಾಂತೇಶ ಕಿವಡಸಣ್ಣವರ ಮಾತನಾಡಿ, ‘ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಮನುಷ್ಯರ ಜೀವಕ್ಕೆ ಕುತ್ತಾಗಿರುವ ಈ ಸೋಂಕಿನ ವಿರುದ್ಧ ವೈದ್ಯರು ಸೆಣಸಾಡುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ 6 ಆಸ್ಪತ್ರೆಗಳಿಗೆ ವಿವಿಧ ಕಂಪನಿಗಳಿಂದ ದೇಣಿಗೆ ಸಂಗ್ರಹಿಸಿ ನೀಡಿದ್ದೇವೆ. ಸೋಂಕಿನ ವಿರುದ್ಧ ಸೆಣಸಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಮಾಧ್ಯಮದವರನ್ನು ಸನ್ಮಾನಿಸಲಾಗುತ್ತಿದೆ’ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ವೀರೇಶ ಕಿವಡಸಣ್ಣವರ ಸ್ವಾಗತಿಸಿದರು. ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಅರುಣಕುಮಾರ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.