ADVERTISEMENT

ಗಳತಗಾ: ಸರ್ಕಾರಿ ಪ್ರೌಢಶಾಲೆಗೆ ಆಗ್ರಹ

ಪ್ರಾಥಮಿಕ ಶಾಲೆಯಲ್ಲಿ 1,600 ಮಕ್ಕಳು

ಸುಧಾಕರ ಎಸ್.ತಳವಾರ, ಬೆಂಗಳೂರು
Published 22 ಜೂನ್ 2020, 11:59 IST
Last Updated 22 ಜೂನ್ 2020, 11:59 IST
ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದಲ್ಲಿರುವ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ
ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದಲ್ಲಿರುವ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ   

ಚಿಕ್ಕೋಡಿ: ‘ನಿಪ್ಪಾಣಿ ತಾಲ್ಲೂಕಿನ ಗಳತಗಾ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಬಡಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗಳತಗಾ 18ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮ ಸೇರಿದಂತೆ ದಿಲಾಲಪೂರವಾಡಿ, ಹಳದಹಟ್ಟಿ, ಶಿಲಂಗಡಿಮರಡಿ, ಭೀಮಾಪೂರವಾಡಿ ಮೊದಲಾದ ಮಜರೆಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 1ರಿಂದ 7ನೇ ತರಗತಿವರೆಗೆ 842 ಗಂಡು ಮತ್ತು 781 ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದರಿಂದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಪ್ರೌಢಶಾಲೆ ಬೇಕು ಎಂಬ ಒತ್ತಾಯ ಅವರದು.

‘ಗಳತಾದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿಯೂ ವೃದ್ಧಿಸುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಬಡಮಕ್ಕಳ ಶೈಕ್ಷಣಿಕ ಉನ್ನತಿಯ ಹಿತದೃಷ್ಟಿಯಿಂದ ಗಳತಗಾದಲ್ಲಿ ಸರ್ಕಾರಿ ಪ್ರೌಢಶಾಲೆ ಅತ್ಯಗತ್ಯವಾಗಿದೆ ಎಂದು ಮುಖಂಡ ಶ್ರೀಕಾಂತ ಬನ್ನೆ ಒತ್ತಾಯಿಸಿದರು.

ADVERTISEMENT

‘ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸುವಂತೆ ಸಚಿವರೂ ಆಗಿರುವ ನಿಪ್ಪಾಣಿ ಶಾಸಕಿ‌ ಶಶಿಕಲಾ ಜೊಲ್ಲೆ ಅವರಿಗೂ ಮನವಿ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

'ಗಳತಗಾ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಿವೆ. ಆದರೆ, ಗಳತತಾ, ಬೇಡಕಿಹಾಳ, ಶಮನೇವಾಡಿ, ಭೋಜ್, ಖಡಕಲಾಟ, ಮಮದಾಪುರ, ಅಕ್ಕೋಳದಲ್ಲೂ ಸರ್ಕಾರಿ ಪ್ರೌಢಶಾಲೆಗಳಿಲ್ಲ. ಅನಿವಾರ್ಯವಾಗಿ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಗಳಲ್ಲಿ ದಾಖಲಾಗುತ್ತಿದ್ದಾರೆ. ಇದರಿಂದ ಹೊರೆ ಆಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಸರ್ಕಾರ ಗ್ರಾಮದಲ್ಲೇ ಪ್ರೌಢಶಾಲೆ ಮಂಜೂರು ಮಾಡಿದರೆ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಸರ್ಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಾಸಾಹೇಬ್ ಹಿರವೆ ತಿಳಿಸಿದರು.

'ಗ್ರಾಮದ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆ ಅವಲೋಕಿಸಿದರೆ ಸರ್ಕಾರಿ ಪ್ರೌಢಶಾಲೆ ಅವಶ್ಯವಾಗಿದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಪ್ರಶಾಂತ ಬುರ್ಗೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.