ADVERTISEMENT

‘ಗಾಂಧಿ ಘರ್‌’ ಸ್ಮಾರಕವಾಗಿಸಲು ಒತ್ತಾಯ

ಶ್ರೀಕಾಂತ ಕಲ್ಲಮ್ಮನವರ
Published 23 ಜನವರಿ 2019, 6:30 IST
Last Updated 23 ಜನವರಿ 2019, 6:30 IST
ಬೆಳಗಾವಿ ತಾಲ್ಲೂಕಿನ ದೇವಗಿರಿಯಲ್ಲಿರುವ ಗಾಂಧಿ ಘರ್‌.
ಬೆಳಗಾವಿ ತಾಲ್ಲೂಕಿನ ದೇವಗಿರಿಯಲ್ಲಿರುವ ಗಾಂಧಿ ಘರ್‌.   

ಬೆಳಗಾವಿ: ಗಾಂಧಿ ತತ್ವಗಳ ಪ್ರಚಾರ ಕೈಗೊಳ್ಳಲು ಅವರ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಸದಾಶಿವರಾವ ಭೋಸಲೆ ಸುಮಾರು 67 ವರ್ಷಗಳ ಹಿಂದೆ ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಬಳಿಯ ದೇವಗಿರಿಯಲ್ಲಿ ನಿರ್ಮಿಸಿದ ‘ಗಾಂಧಿ ಘರ್‌’ ಅನ್ನು ಸ್ಮಾರಕವನ್ನಾಗಿಸಬೇಕೆಂದು ಭೋಸಲೆ ಅವರ ಕುಟುಂಬ ವರ್ಗದವರು ಒತ್ತಾಯಿಸಿದ್ದಾರೆ.

ಮಹಾತ್ಮ ಗಾಂಧಿ ಜನ್ಮದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಗಾಂಧಿ ಹಾಗೂ ಅವರಿಗೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಹಿನ್ನೆಲೆಯಲ್ಲಿ ‘ಗಾಂಧಿ ಘರ್‌’ ಅನ್ನು ಸ್ಮಾರಕವನ್ನಾಗಿಸಲು ಕ್ರಮಕೈಗೊಳ್ಳಬೇಕೆಂದು ಸದಾಶಿವರಾವ ಅವರ ಪುತ್ರ ವಿನೋದ ಭೋಸಲೆ ಅವರು ಗಾಂಧಿ ಸ್ಮಾರಕ ನಿಧಿಗೆ ಆಗ್ರಹಿಸಿದ್ದಾರೆ.

‘ಬೆಂಗಳೂರಿನಲ್ಲಿರುವ ಸ್ಮಾರಕ ನಿಧಿಯ ಕಚೇರಿಗೆ 2– 3 ಬಾರಿ ಭೇಟಿ ಮಾಡಿ, ಅಲ್ಲಿನ ಹಿರಿಯರನ್ನು ಒತ್ತಾಯಿಸಿದ್ದೇನೆ. ‘ಗಾಂಧಿ ಘರ್‌’ಗೆ ಇರುವ ಐತಿಹಾಸಿಕ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಕೂಡ ಇಲ್ಲಿಗೆ ಬಂದುಹೋಗಿದ್ದಾರೆ. ಆದಾಗ್ಯೂ, ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಶೀಘ್ರ ಕ್ರಮಕೈಗೊಳ್ಳದಿದ್ದರೆ ಕುಸಿದುಬೀಳುವ ಆತಂಕವಿದೆ’ ಎಂದು ಸದಾಶಿವರಾವ ಅವರ ಪುತ್ರ ವಿನೋದ ಭೋಸಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗಾಂಧಿ– ವಿನೋಬಾ ಭಾವೆ ಅನುಯಾಯಿ:
ಸದಾಶಿವರಾವ ಭೋಸಲೆ ಅವರ ತಂದೆ ಬಾಪುಸಾಹೇಬ ಭೋಸಲೆ ಕಡೋಲಿ ಗ್ರಾಮದ ಬಹುದೊಡ್ಡ ಜಮೀನುದಾರರಾಗಿದ್ದರು. ನೂರಾರು ಎಕರೆ ಜಮೀನಿನ ಒಡೆಯರಾಗಿದ್ದರು. ಮಹಾತ್ಮ ಗಾಂಧಿ ಹಾಗೂ ವಿನೋಬಾ ಭಾವೆ ಅವರ ಅನುಯಾಯಿಯಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಸ್ವಾತಂತ್ರ್ಯಯೋಧರಿಗೆ ಆಶ್ರಯದಾತರಾಗಿದ್ದರು.

ಸದಾಶಿವರಾವ ಭೋಸಲೆ ಅವರು 1920ರ ಡಿಸೆಂಬರ್‌ 16ರಂದು ಹುಟ್ಟಿದರು. ಯೌವನಾವಸ್ಥೆ ತಲುಪುವುದರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.

2 ಬಾರಿ ಶಾಸಕ:
ದೇಶ ಸ್ವಾತಂತ್ರ್ಯಗೊಳ್ಳುವ ಮೊದಲು 1946ರಲ್ಲಿ ಬ್ರಿಟಿಷ್‌ ಸರ್ಕಾರವು ಮೊದಲ ಬಾರಿ ಚುನಾವಣೆ ನಡೆಸಿತ್ತು. ಆ ವೇಳೆ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸದಾಶಿವರಾವ ಆಯ್ಕೆಯಾಗಿದ್ದರು. ನಂತರ 1952ರಲ್ಲಿ ಹಿರೇಬಾಗೇವಾಡಿ ಕ್ಷೇತ್ರದಿಂದ ಆಯ್ಕೆಯಾದರು. ಸ್ಥಳೀಯ ಜನರ ಅಭಿವೃದ್ಧಿ ಮಾಡಬೇಕೆಂದು ರಾಜೀನಾಮೆ ನೀಡಿದರು.

ವಿನೋಬಾ ಭಾವೆ ಅವರ ಭೂ ದಾನ ಚಳುವಳಿಯಿಂದ ಪ್ರೇರಣೆಯಾದ ಅವರು ತಮ್ಮ ಹೊಲಗಳನ್ನು ರೈತರಿಗೆ ದಾನ ಮಾಡಿದರು. ಕಡೋಲಿ ಸಮೀಪದ ದೇವಗಿರಿಯಲ್ಲಿ ಬೃಹತ್‌ ಬಂಗಲೆ ಕಟ್ಟಿಸಿ ‘ಗಾಂಧಿ ಘರ್‌’ ನಿರ್ಮಿಸಿದರು. ಗಾಂಧಿ ಅವರ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯದ ತತ್ವಗಳನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತರಿಸಿದರು.

‘ಗಾಂಧಿ ಘರ್‌’ದಲ್ಲಿ ನೂಲು ತೆಗೆಯುವ, ಮಕ್ಕಳಿಗೆ ಅಕ್ಷರಾಭ್ಯಾಸ, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಸಸ್ಯಗಳನ್ನು ಬೆಳೆಸುವುದು, ಸ್ವಚ್ಛತೆ ಬಗ್ಗೆ ಜಾಗೃತಿ, ಸಾಬೂನು ತಯಾರಿಸುವುದು ಸೇರಿದಂತೆ ವಿವಿಧ ಕಾರ್ಯಗಳು ನಡೆಯುತ್ತಿದ್ದವು. ವಿವಿಧ ವಿಷಯಗಳ ಕುರಿತು ಚಿಂತನ– ಮಂಥನ ಕೂಡ ನಡೆಯುತ್ತಿತ್ತು.

ಹಲವರ ಭೇಟಿ:
‘ಗಾಂಧಿ ಘರ್‌’ಗೆ ಸ್ವಾತಂತ್ರ್ಯ ಹೋರಾಟಗಾರರಾದ ವಿನೋಬಾ ಭಾವೆ, ಕ್ರಾಂತಿ ಸಿಂಹ ಸಂಘಟನೆಯ ನಾನಾ ಪಾಟೀಲ, ಮೊರಾರ್ಜಿ ದೇಸಾಯಿ, ಯಶವಂತರಾವ ಚವ್ಹಾಣ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ಅನಾರೋಗ್ಯ:
ಕಳೆದ ಆರು ತಿಂಗಳ ಹಿಂದಿನವರೆಗೂ ‘ಗಾಂಧಿ ಘರ್‌’ ತುಂಬಾ ಚಟುವಟಿಕೆಯಿಂದ ಇತ್ತು. ಎಲ್ಲ ಚಟುವಟಿಕೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಸದಾಶಿವರಾವ ಅವರು ವಯೋಸಹಜ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಅವರು ತಮ್ಮ ಪತ್ನಿ ವತ್ಸಲಾ ಅವರ ಜೊತೆ ಕಡೋಲಿ ಗ್ರಾಮದಲ್ಲಿರುವ, ತಮ್ಮ ಪುತ್ರ ವಿನೋದ ಅವರ ಮನೆಯಲ್ಲಿ ವಾಸವಾಗಿದ್ದಾರೆ. ಈಗ ‘ಗಾಂಧಿ ಘರ್‌’ದಲ್ಲಿ ಅಂಗನವಾಡಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಇದನ್ನು ಬಿಟ್ಟರೆ ಇನ್ನುಳಿದ ಎಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.