ಬೆಳಗಾವಿ: 11 ದಿನಗಳ ಕಾಲ ಪೂಜೆಗೊಂಡ ವಿಘ್ನ ನಿವಾರಕನಿಗೆ ಈಗ ವಿದಾಯ ಹೇಳುವ ಸಮಯ ಬಂದಿದೆ. ಶನಿವಾರ (ಸೆ.6) ಸಂಜೆಗೆ ಅದ್ದೂರಿ ಮೆರವಣಿಗೆ ಮೂಲಕ ಮೂಷಕವಾಹನ ತನ್ನ ವಿಸರ್ಜನಾ ಸವಾರಿ ಆರಂಭಿಸಲಿದ್ದಾನೆ. ಈ ಸಂಭ್ರಮ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಕಾವಲಿಗಾಗಿ 4,000ಕ್ಕೂ ಹೆಚ್ಚು ಪೊಲೀಸರ ಪಡೆ ಸನ್ನದ್ಧವಾಗಿದೆ.
ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಕೆಎಸ್‌ಆರ್‌ಪಿ ಐಜಿಪಿ ಸಂದೀಪ ಪಾಟೀಲ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೇರೆ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಯಿಸಲಾಗಿದೆ. ಬೆಳಗಾವಿ: 11 ದಿನಗಳ ಕಾಲ ಪೂಜೆಗೊಂಡ ವಿಘ್ನ ನಿವಾರಕನಿಗೆ ಈಗ ವಿದಾಯ ಹೇಳುವ ಸಮಯ ಬಂದಿದೆ. ಶನಿವಾರ (ಸೆ.6) ಸಂಜೆಗೆ ಅದ್ಧೂರಿ ಮೆರವಣಿಗೆ ಮೂಲಕ ಮೂಷಕವಾಹನ ತನ್ನ ವಿಸರ್ಜನಾ ಸವಾರಿ ಆರಂಭಿಸಲಿದ್ದಾನೆ. ಈ ಸಂಭ್ರಮ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಕಾವಲಿಗಾಗಿ 4,000ಕ್ಕೂ ಹೆಚ್ಚು ಪೊಲೀಸರ ಪಡೆ ಸನ್ನದ್ಧವಾಗಿದೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಪೊಲೀಸರಿಗೆ ಕರ್ತವ್ಯದ ಜವಾಬ್ದಾರಿ ವಹಿಸಿ, ಕಾರ್ಯನಿರ್ವಹಣೆ ಕುರಿತು ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟರು.
‘ಭದ್ರತೆಗೆ ಒಬ್ಬರು ಡಿಐಜಿ, ಎಸ್‌ಪಿ ಹಾಗೂ ಎಎಸ್‌ಪಿ ಶ್ರೇಣಿಯ ಒಂಭತ್ತು ಅಧಿಕಾರಿಗಳು, 30 ಡಿವೈಎಸ್‌ಪಿ, 104 ಇನ್‌ಸ್ಪೆಕ್ಟರ್, 389 ಸಬ್ ಇನ್‌ಸ್ಪೆಕ್ಟರ್/ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್, 2,777 ಕಾನ್‌ಸ್ಟೆಬಲ್, 410 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. 10 ಕೆಎಸ್‌ಆರ್‌ಪಿ ತುಕಡಿ, 9 ಸಿಎಆರ್ ತುಕಡಿ ಮತ್ತು ಒಂದು ಕ್ಷಿಪ್ರ ಕಾರ್ಯಪಡೆ ಇದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.
‘760 ಸಿ.ಸಿ.ಟಿ.ವಿ ಕ್ಯಾಮೆರಾಗಳು ಮೆರವಣಿಗೆ ದೃಶ್ಯಾವಳಿ ಸೆರೆಹಿಡಿಯಲಿವೆ. 14 ಡ್ರೋನ್ ಕ್ಯಾಮೆರಾಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಮೆರವಣಿಗೆ ವೀಕ್ಷಣೆಗೆ ಬರುವವರ ವಾಹನಗಳ ನಿಲುಗಡೆಗೆ 17 ಕಡೆ ವ್ಯವಸ್ಥೆ ಮಾಡಲಾಗಿದೆ’ ಎಂದರು.
24 ಕ್ರೇನ್‌ಗಳ ಬಳಕೆ: ‘ಮೂರ್ತಿಗಳನ್ನು ವಿಸರ್ಜಿಸುವ ಹೊಂಡಗಳು, ಕೆರೆಗಳನ್ನು ಸ್ವಚ್ಛಗೊಳಿಸಲಾಗಿದೆ. ಮೂರ್ತಿಗಳನ್ನು ಎತ್ತಲು ಮತ್ತು ವಿಸರ್ಜಿಸಲು ಅನುಕೂಲವಾಗುವಂತೆ 24 ಕ್ರೇನ್ ಬಳಸುತ್ತಿದ್ದೇವೆ. ಮೆರವಣಿಗೆ ಮಾರ್ಗದಲ್ಲಿನ ಮರಗಳ ಕೊಂಬೆ ತೆರವುಗೊಳಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತೆ ಬಿ.ಶುಭ ಹೇಳಿದ್ದಾರೆ.
‘ಹೊಂಡಗಳು ಮತ್ತು ಮೆರವಣಿಗೆ ಮಾರ್ಗದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇದೆ. ಧರ್ಮವೀರ ಸಂಭಾಜಿ ವೃತ್ತದ ಬಳಿ ವೀಕ್ಷಕರ ಗ್ಯಾಲರಿ ನಿರ್ಮಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಮಾರ್ಗದಲ್ಲೇ ಮೆರವಣಿಗೆ: 2023ರಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ 30 ತಾಸು, 2024ರಲ್ಲಿ 33 ತಾಸು ನಡೆದಿತ್ತು. ಈ ಬಾರಿ ವಿಸರ್ಜನೆ ಸಮಯ ತಗ್ಗಿಸುವ ಸಲುವಾಗಿ ಮೆರವಣಿಗೆ ಮಾರ್ಗ ಬದಲಿಸಬೇಕು ಎಂದು ಪೊಲೀಸರು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳನ್ನು ಕೋರಿದ್ದರು. ಆದರೆ, ಅವರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮಾರ್ಗದಲ್ಲೇ ನಡೆಯಲಿದೆ.
ಇಲ್ಲಿನ ಹುತಾತ್ಮ ಚೌಕ್‌ನಲ್ಲಿ ಸಂಜೆ 4ಕ್ಕೆ ಆರಂಭವಾಗುವ ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ್, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.