ADVERTISEMENT

ಬೆಳಗಾವಿಯಲ್ಲಿ ಸರಳ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 9:55 IST
Last Updated 23 ಆಗಸ್ಟ್ 2020, 9:55 IST
ಬೆಳಗಾವಿಯಲ್ಲಿ ಮನೆಗೆ ಬಂದ ಗಣಪನಿಗೆ ಆರತಿಯ ಸ್ವಾಗತ
ಬೆಳಗಾವಿಯಲ್ಲಿ ಮನೆಗೆ ಬಂದ ಗಣಪನಿಗೆ ಆರತಿಯ ಸ್ವಾಗತ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ವಿಘ್ನ ನಿವಾರಕ ವಿನಾಯಕನ ಭಕ್ತರು ಗಣೇಶೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಿದರು.

ಕೋವಿಡ್–19 ಸೋಂಕು ಹರಡುವ ಭೀತಿಯಿಂದಾಗಿ ಷರತ್ತುಗಳನ್ನು ವಿಧಿಸಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಅಬ್ಬರ ಕಂಡುಬರಲಿಲ್ಲವಾದರೂ ಸಂಭ್ರಮಕ್ಕೆ ಅಡ್ಡಿ ಇರಲಿಲ್ಲ. ತುಂತುರು ಮಳೆಯಲ್ಲೂ ಗಣೇಶ ಮೂರ್ತಿಗಳನ್ನು ಕರೆ ತಂದ ಜನರು ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಕೊರೊನಾ ಆತಂಕವನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಸಿಹಿಯೂಟ ಮಾಡಿ ಮನೆ ಮಂದಿಯೊಂದಿಗೆ ಸಮಯ ಕಳೆದರು.

ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಗಳನ್ನು ಕೆಲವರು ಶನಿವಾರವೇ ವಿಸರ್ಜನೆ ಮಾಡಿದರು. ಈ ಬಾರಿ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗಳು ಕಂಡುಬರಲಿಲ್ಲ. ಕುಟುಂಬದ ಕೆಲವರು ಹಾಗೂ ಮಂಡಳದವರು ಕೆಲವೇ ಮಂದಿ ಸೇರಿ ಮೂರ್ತಿಯನ್ನು ತಂದರು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಗಳನ್ನು ನೋಡಲು ಭಕ್ತರು ಕುಟುಂಬ ಸಮೇತ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಳೆಯ ನಡುವೆಯೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದುದ್ದೂ ಕಂಡುಬಂತು.

ADVERTISEMENT

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಗಣೇಶ ಹಬ್ಬದ ಪ್ರಯುಕ್ತ ತಾಲ್ಲೂಕಿನ ನಾಗೇರಹಾಳ ಗ್ರಾಮದ ಮನೆಯಲ್ಲಿ ನಡೆದ ಗಣೇಶೋತ್ಸವದಲ್ಲಿ ತಾಯಿ ಸೋಮವ್ವ ಚ. ಅಂಗಡಿ ಹಾಗೂ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಕುಟುಂಬ ಸಮೇತ ಬಂದು ಚನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ತಮ್ಮ ನಿವಾಸಕ್ಕೆ ಒಯ್ದು ಪ್ರತಿಷ್ಠಾಪಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ವೈವಿಧ್ಯದಿಂದ ಕೂಡಿದ್ದು, ಸಾರ್ವಜನಿಕರ ಗಮನಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.