ADVERTISEMENT

ಬೆಳಗಾವಿ: ₹ 61.01 ಲಕ್ಷ ಮೌಲ್ಯದ 755 ಕೆ.ಜಿ. 270 ಗ್ರಾಂ. ಗಾಂಜಾ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 13:04 IST
Last Updated 26 ಜೂನ್ 2021, 13:04 IST
ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ವಶಕ್ಕೆ ಪಡೆದಿದ್ದ ಮಾದಕ ಪದಾರ್ಥವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ನಾಶಪಡಿಸಲಾಯಿತು
ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ವಶಕ್ಕೆ ಪಡೆದಿದ್ದ ಮಾದಕ ಪದಾರ್ಥವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ನಾಶಪಡಿಸಲಾಯಿತು   

ಬೆಳಗಾವಿ: ಜಿಲ್ಲೆಯ ವಿವಿಧೆಡೆ 129 ಪ್ರಕರಣಗಳಲ್ಲಿ ವಶ‍ಪಡಿಸಿಕೊಂಡಿದ್ದ ₹ 61.01 ಲಕ್ಷ ಮೌಲ್ಯದ 755 ಕೆ.ಜಿ. 270 ಗ್ರಾಂ. ಗಾಂಜಾ ಹಾಗೂ 31 ಕೆ.ಜಿ. 400 ಗ್ರಾಂ. ಪಾಪ್ಪಿ ಎನ್ನುವ ಮಾದಕ ಪದಾರ್ಥವನ್ನು ಜಿಲ್ಲಾ ‍ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ನಾಶಪಡಿಸಲಾಯಿತು.

‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಸವದತ್ತಿ ತಾಲ್ಲೂಕು ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೂಗೊಪ್ಪದ ಗ್ರೀನ್ ಮ್ಯಾನೇಜ್‌ಮೆಂಟ್ ಪ್ರೈ.ಲಿ. ಕಾರ್ಖಾನೆಯ ಸ್ಥಳದಲ್ಲಿ ನಿಯಮಾನುಸಾರ ನಾಶಪಡಿಸಲಾಯಿತು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೆಳೆಯುತ್ತಿದ್ದ, ಸಾಗಣೆ ಮಾಡುತ್ತಿದ್ದ ಹಾಗೂ ಮಾರುತ್ತಿದ್ದವರ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದ ಗಾಂಜಾ ಇದಾಗಿದೆ. ಎನ್‌ಡಿಪಿಎಸ್‌ ಕಾಯ್ದೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಜಿಲ್ಲಾ ಮಾದಕ ದ್ರವ್ಯ ವಿಲೇವಾರಿ ಸಮಿತಿಯಿಂದ ಅನುಮತಿ ಪಡೆದು ನಾಶಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಗಾಂಜಾ ಬೆಳೆಯುವುದು, ಮಾದಕ ವಸ್ತುಗಳ ಮಾರಾಟ, ಸಾಗಣೆಯನ್ನು ಬಂದ್ ಮಾಡುವ ಮೂಲಕ ಬೇಡಿಕೆ ಮತ್ತು ಪೂರೈಕೆ ನಡುವಿನ ಸರಪಳಿ ತುಂಡರಿಸುವುದು ನಮ್ಮ ಉದ್ದೇಶವಾಗಿದೆ. ಜಾಲವನ್ನು ಪತ್ತೆ ಹಚ್ಚಲಾಗುತ್ತಿದೆ. ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ, ಕಾನೂನಿನ ಅಡಿ ಶಿಕ್ಷೆ ಕೊಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಮಾದಕ ಪದಾರ್ಥಗಳ ವಿರುದ್ಧ ಸಮರ ಸಾರಿದ್ದೇವೆ. ಹಲವು ಮಂದಿ ಆರೋಪಿಗಳನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದರು.

‘ಪೂರೈಕೆಯನ್ನು ನಾವು ತಡೆಯುತ್ತೇವೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಮಾಡಲು ಸಮಾಜದ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಬೇಕು. ಮಾದಕ ದ್ರವ್ಯಗಳಿಂದ ಆಗುವ ಅನಾಹುತಗಳ ಕುರಿತು ಜಾಗೃತಿ ಹೊಂದಬೇಕು’ ಎಂದು ಕೋರಿದರು.

ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.