ADVERTISEMENT

ಪ್ರವಾಹದಿಂದ ಬೆಳೆ ನಷ್ಟ | ಪರಿಹಾರ ನೀಡಿ: ಸರ್ಕಾರಕ್ಕೆ ಈರಣ್ಣ ಕಡಾಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:53 IST
Last Updated 6 ಸೆಪ್ಟೆಂಬರ್ 2025, 2:53 IST
ಮೂಡಲಗಿ ತಾಲ್ಲೂಕಿನ ಘಟಪ್ರಭಾ ನದಿ  ಪ್ರವಾಹ ಪೀಡಿತ ಗ್ರಾಮಗಳಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು
ಮೂಡಲಗಿ ತಾಲ್ಲೂಕಿನ ಘಟಪ್ರಭಾ ನದಿ  ಪ್ರವಾಹ ಪೀಡಿತ ಗ್ರಾಮಗಳಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು   

ಮೂಡಲಗಿ: ‘ಘಟಪ್ರಭಾ ನದಿಯ ಪ್ರವಾಹದಿಂದ ರೈತರು ಬೆಳೆದ ಕೋಟ್ಯಂತರ ಮೌಲ್ಯದ ಬೆಳೆಗಳು ನೀರು ಪಾಲಾಗಿದ್ದು, ವಿದ್ಯುತ್ ಪರಿಕರಗಳು, ರಸ್ತೆಗಳು ಹಾಳಾಗಿದ್ದು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಕೂಡಲೇ ಎಸ್‌ಡಿಆರ್‌ಎಫ್‌ ನಿಧಿಯ ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸಂತ್ರಸ್ತರ ರೈತರ ನೆರವಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.

ತಾಲ್ಲೂಕಿನ ಘಟಪ್ರಭಾ ನದಿ ತೀರದ ಪ್ರವಾಹ ಪೀಡಿತ ಅವರಾದಿ, ಅರಳಿಮಟ್ಟಿ, ಢವಳೇಶ್ವರ ಹಾಗೂ ಮಸಗುಪ್ಪಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪ್ರವಾಹದಿಂದ ಉಂಟಾದ ಹಾನಿಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅವರು ಮಾತನಾಡಿರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 7.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಧಾರಾಕಾರ ಮಳೆ ಹಾಗೂ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಗೀಡಾಗಿದೆ. ನದಿತೀರದಲ್ಲಿದ್ದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು, 31, 970 ಹೆಕ್ಟೇರ್ ಹೆಸರು, 12 ಸಾವಿರ ಹೆಕ್ಟೇರ್ ಗೋವಿನ ಜೋಳ, 3500 ಹೆಕ್ಟೇರ್ ಪ್ರದೇಶದಲ್ಲಿನ ಸೋಯಾಬಿನ್ ಬೆಳೆ ಹಾನಿಗೀಡಾಗಿದೆ. 11 ಸಾವಿರ ಹೆಕ್ಟೇರ್ ಭತ್ತ ಸೇರಿದಂತೆ ಇತರೆ ಬೆಳೆ ನೀರುಪಾಲಾಗಿವೆ ಹಾಗೂ 1,545 ಹೆಕ್ಟೇರ್‌ಕ್ಕಿಂತ ಅಧಿಕ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ ಎಂದು ತಿಳಿಸಿದರು.

ಜಿಲ್ಲಾ ನೋಡಲ್ ಅಧಿಕಾರಿ ಅನೀಲ ಹೆಗಡೆ, ಗ್ರೇಡ್-1 ತಹಶೀಲ್ದಾರ್ ಶಿವಾನಂದ ಬಬಲಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಸ್.ಎಸ್. ರೊಡ್ಡನ್ನವರ, ಕೃಷಿ ಇಲಾಖೆಯ ಪರಪ್ಪ ಹುಲಗಬಾಳ, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಪಾಟೀಲ, ಅವರಾಧಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಶ್ರೀಶೈಲ ಪೂಜೇರಿ, ಸಿ.ಎಲ್. ನಾಯಕ, ಶಿವಪ್ಪ ಪೂಜೇರಿ, ಲಕ್ಷ್ಮಣ ಉಟಗಿ, ಗಂಗಾಧರ ಹಿರೇಮಠ, ರಾಮನಗೌಡ ಪಾಟೀಲ, ಬಸವರಾಜ ಪಡಶೆಟ್ಟಿ, ರಂಗಪ್ಪ ಉಪ್ಪಾರ, ರಾಜು ಉಪ್ಪಾರ, ಗೋವಿಂದ ಚನ್ನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.