ADVERTISEMENT

ಘಟಪ್ರಭಾ | ಸದ್ಯದಲ್ಲೇ ನೂತನ ಸೇತುವೆ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 4:58 IST
Last Updated 6 ಫೆಬ್ರುವರಿ 2024, 4:58 IST
ಘಟಪ್ರಭಾ ಸಮೀಪದ ಗೋಕಾಕ ಫಾಲ್ಸ್‌ ಬಳಿಯ ನೂತನ ಸೇತುವೆ
ಘಟಪ್ರಭಾ ಸಮೀಪದ ಗೋಕಾಕ ಫಾಲ್ಸ್‌ ಬಳಿಯ ನೂತನ ಸೇತುವೆ   

ಘಟಪ್ರಭಾ: ಸಮೀಪದ ಗೋಕಾಕ ಜಲಪಾತದ ಪಕ್ಕ ನಿರ್ಮಿಸಲಾದ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ.

ಗೋಕಾಕ ಫಾಲ್ಸ್ -ಧುಪದಾಳ ಮಧ್ಯದ ಈ ಸೇತುವೆಯನ್ನು ತೂಗು ಸೇತುವೆಯ ಪರ್ಯಾಯವಾಗಿ ನಿರ್ಮಿಸಲಾಗಿದೆ. ಏಳು ವರ್ಷಗಳಿಂದ ನಡೆದ ಕಾಮಗಾರಿ ಈಗ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಜಲಪಾತದ ಬಳಿ ಇರುವ ಕ್ಯಾಂಬೆಲ್ಲ ಉದ್ಯಾನದ ಪಶ್ಚಿಮ ಭಾಗದಲ್ಲಿ ಹಾಯ್ದು ಹೋಗುವ ಜತ್ತ-ಗೊಡಚಿನಮಲ್ಕಿ ರಾಷ್ಟ್ರೀಯ ಹೆದ್ದಾರಿಗೆ ಸೆತುವೆ ಸಂಪರ್ಕವನ್ನು ಇದು ಹೊಂದಲಿದೆ.

ಇಲ್ಲಿರುವ ಶತಮಾನಕ್ಕೂ ಹಳೆಯದ ಜವಳಿ ಮಿಲ್ಲಿನ ಕೆಲವು ಕಾರ್ಮಿಕರು ಧುಪದಾಳ ಮೂಲದವರಿದ್ದು, ಕೊಣ್ಣೂರು ಮಾರ್ಗವಾಗಿ 5 ಕೀ.ಮಿ. ದೂರದಿಂದ ಸಂಚರಿಸುತ್ತಿದ್ದರು. ಈ ಸೇತುವೆಯ ಮೂಲಕ ಕೇವಲ ಅರ್ಧ ಕೀ.ಮಿ. ಅಂತರದಲ್ಲಿ ಸಂಚರಿಸಲು ಅನುಕೂಲವಾಗಲಿದೆ. ತೂಗು ಸೇತುವೆಯಲ್ಲಿ ಕೇವಲ ನಡೆದು ಸಾಗಲು ಮಾತ್ರ ಅವಕಾಶವಿತ್ತು. ತೀರ ಹಳೆಯದ್ದಾಗಿದ್ದರಿಂದ ಹೆಚ್ಚು ಭಾರವಾಗದಂತೆ ಅಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.

ADVERTISEMENT

ಶಾಸಕ ರಮೇಶ ಜಾರಕಿಹೊಳಿಯವರ ಕನಸಿನ ಕೂಸಾದ ಈ ಸೇತುವೆಯ ಕಾಮಗಾರಿಗೆ 2017 ರಲ್ಲಿ ಅನುಮೋದನೆ ದೊರಕಿ ಕಾಮಗಾರಿ ಆರಂಭಗೊಂಡಿತ್ತು. ₹ 15.54 ಕೋಟಿ ವೆಚ್ಚದಲ್ಲಿ ಅದೇ ವರ್ಷ ಜನೇವರಿ 31 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮಂಜೂರಾತಿ ದೊರಕಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ, 2019ರಲ್ಲಿ ಸಂಭವಿಸಿದ ಪ್ರವಾಹ ಹಾಗೂ ಲಾಕ್‌ಡೌನ್‌ದಿಂದಾಗಿ ಕಾಮಗಾರಿಗೆ ತೀವ್ರ ಹಿನ್ನೆಡೆ ಉಂಟಾಯಿತು. ಏಳು ವರ್ಷಗಳ ನಂತರ ಈಗ ಸೇತುವೆ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ.

ಈ ಸೇತುವೆ 256 ಮೀ ಉದ್ದ, 12 ಮೀಟರ್ ಅಗಲವಿದೆ. 14 ಅಂಕಣಗಳು, 9 ಮೀಟರ್‌ ವಾಹನ ಸಂಚಾರಕ್ಕೆ ಹಾಗೂ ಎರಡೂ ಬದಿಗೆ 1.5 ಮೀ ಪಾದಚಾರಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ, ಜವಳಿ ಕಾರ್ಖಾನೆಯ ಕಾರ್ಮಿಕರಿಗೆ, ಎರಡು ಪಟ್ಟಣದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ವಿಸ್ತರಿಸಿ ಚೌಕಿ ಬಳಿ ಎರಡು ಚಿಕ್ಕ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ರಸ್ತೆಯ ವಿಸ್ತರಣೆ ಕಾಮಗಾರಿಯೂ ನಡೆದಿದ್ದೂ ಅದು ಕೂಡ ಪೂರ್ಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.

ಒಟ್ಟಾರೆ ಘಟಪ್ರಭಾಕ್ಕೆ ಪರ್ಯಾಯ ಮಾರ್ಗದ ಸೇತುವೆಯಿಂದ ನಿತ್ಯ ಸಂಚರಿಸುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಯ ನೌಕರರಿಗೆ ವಿಶೇಷವಾಗಿ ಘಟಪ್ರಭಾ ರೈಲು ನಿಲ್ದಾಣಕ್ಕೆ ತೆರಳುವ ಜನರಿಗೆ ಅನುಕೂಲವಾಗಲಿದೆ.

ಬರಲಿದೆ ಗ್ಲಾಸ್ ಸೇತುವೆ

2021ರಲ್ಲಿ ಸೇತುವೆ ಕಾಮಗಾರಿ ವೀಕ್ಷಿಸಿದ ಅಂದಿನ ಉಪ ಮುಖ್ಯಮಂತ್ರಿ ಕಾರಜೋಳ ಅವರು ಗುತ್ತಿಗೆದಾರರಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದರು. ಆದರೆ ಆಗ ವ್ಯಾಪಕ ಮಳೆ ಸುರಿದ ಪರಿಣಾಮವಾಗಿ ಕಾಮಗಾರಿ ವಿಳಂಬವಾಗಿತ್ತು. ಈಗ ಈ  ಕಾಮಗಾರಿ ಪೂರ್ಣಗೊಂಡಿದೆ. ಪ್ರವಾಸಿಗರಿಗೆ ಆಕರ್ಷಣೀಯ ಗೋಕಾಕ ಜಲಪಾತದ ವೀಕ್ಷಣೆಗೆಂದು ಗ್ಲಾಸ್ ಸೇತುವೆಯ ನಿರ್ಮಾಣದ ಶಾಸಕರ ಪ್ರಸ್ತಾವನೆಗೂ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ಅದೂ ಕೂಡ ನಿರ್ಮಾಣಗೊಳ್ಳಲಿದೆ.

ಘಟಪ್ರಭಾ ಸಮೀಪದ ಗೋಕಾಕ ಫಾಲ್ಸ್‌ ಬಳಿಯ ನೂತನ ಸೇತುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.