ADVERTISEMENT

ಕಬ್ಬಿನ ಬಿಲ್‌ ಪಾವತಿ, ಬಾಕಿ ವಿವರ ಬಹಿರಂಗಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 9:45 IST
Last Updated 12 ಏಪ್ರಿಲ್ 2020, 9:45 IST
ಸಿದಗೌಡ ಮೋದಗಿ
ಸಿದಗೌಡ ಮೋದಗಿ   

ಬೆಳಗಾವಿ: ‘ಪ್ರಸಕ್ತ ವರ್ಷ ಕಬ್ಬು ನುರಿಯುವ ಹಂಗಾಮು ಆರಂಭವಾದಾಗಿನಿಂದ ಮಾರ್ಚ್‌ 31ರವರೆಗೆ ಸಕ್ಕರೆ ಕಾರ್ಖಾನೆಗಳು ಎಷ್ಟೆಷ್ಟು ಕಬ್ಬು ನುರಿಸಿವೆ, ಈವರೆಗೆ ರೈತರಿಗೆ ಎಷ್ಟು ಹಣ ಸಂದಾಯ ಮಾಡಿವೆ ಮತ್ತು ಎಷ್ಟು ಬಾಕಿ ಇದೆ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿ ತಕ್ಷಣ ಬಹಿರಂಗಪಡಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.

‘ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಜಿಲ್ಲಾಧಿಕಾರಿ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿ ಅಥವಾ ಸಕ್ಕರೆ ಆಯುಕ್ತರಾಗಲಿ ಸ್ಪಂದಿಸುತ್ತಿಲ್ಲ. ಕೊರೊನಾ ಭೀತಿ ಮುಂದಿಟ್ಟುಕೊಂಡು ಸಮಸ್ಯೆಗಳನ್ನು ಮರೆಮಾಚುವ ವ್ಯವಸ್ಥಿತ ತಂತ್ರವನ್ನು ಅಧಿಕಾರಿಗಳು ಅನುಸರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಲಾಕ್ ಡೌನ್‌ನಿಂದಾಗಿ ರೈತರು, ಹೂ ಬೆಳೆಗಾರರು, ತೋಟಗಾರಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದಾರೆ. ಆರ್ಥಿಕವಾಗಿ ಹಿಂದೆಂದೂ ಕಾಣದಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ರೈತರಿಗೆ ಆರ್ಥಿಕವಾಗಿ ಆಧಾರವಾಗಿರುವುದು ಕಬ್ಬಿನ ಬಿಲ್‌ ಮಾತ್ರ. ಇಂತಹ ಸಂಕಷ್ಟದ ಸಮಯದಲ್ಲೂ ಕಾರ್ಖಾನೆಗಳ ಮಾಲೀಕರು ಹಾಗೂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಕೊಡಿಸಲು ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.