ಗೋಕಾಕ: ಇಲ್ಲಿನ ಪ್ರಸಿದ್ಧ ಮೆರಕನಟ್ಟಿ ಲಕ್ಷ್ಮಿ ದೇವಿಯ ಜಾತ್ರೆ ಜೂನ್ 30ರಿಂದ ಜುಲೈ 8ರ ವರೆಗೆ ನಡೆಯಲಿದ್ದು, ಗೋಕಾಕ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜಾತ್ರೆ 2020ರಲ್ಲಿ ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನಡೆಯಲೇ ಇಲ್ಲ.
ಬಸ್ ನಿಲ್ದಾಣವನ್ನು ಶುಚಿಗೊಳಿಸಿ, ಡಾಂಬರೀಕರಣ ಮಾಡಿದ್ದಲ್ಲದೇ ಪ್ರತಿಯೊಂದು ರಸ್ತೆ ಡಾಂಬರೀಕರಣಗೊಂಡಿದೆ. ಚಿಕ್ಕೋಳಿ ಸೇತುವೆ-ನಾಕಾ ನಂ. 1 ರಸ್ತೆಯನ್ನು ಬೆಂಗಳೂರು ಮಾಹಾನಗರ ರಸ್ತೆಗಳಂತೆ ವಿಸ್ತರಣೆ ಮಾಡಿ, ಸಿಮೆಂಟ್ ರಸ್ತೆ, ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ತಾಲ್ಲೂಕು ಆಡಳಿತ ಈ ವರ್ಷವೂ ಜಾತ್ರೆಯಲ್ಲಿ ಪ್ರಾಣಿ ವಧೆಯನ್ನು ನಿಷೇಧಿಸಿದೆ.
ಕಾರ್ಯಕ್ರಮಗಳ ವಿವರ: ಜೂನ್ 30ರಂದು ದ್ಯಾಮವ್ವ ದೇವಿಯರನ್ನು ಜಿನಗಾರ ಮನೆಯಿಂದ ಸಂಜೆ 4ಕ್ಕೆ ಉತ್ಸವದ ಮೂಲಕ ಕರೆದೊಯ್ದು ಅಂಬಿಗೇರ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡುವುದು, ಸಂಜೆ ನಗರದಲ್ಲಿ ದೀಪಾಲಂಕಾರ ಸೇವೆ ನಡೆಯಲಿದೆ.
ಜುಲೈ 1ರಂದು ದೇವಿಯರಿಗೆ ಅಭಿಷೇಕ, ಪೂಜೆ, ಪುರಜನರ ನೈವೈದ್ಯ ಸಮರ್ಪಣೆ, ದೇವಿಯರ ಪಾಲಕಿ, ಉಡಿ ತುಂಬುವುದು, ದೇವಿಯರ ಹೊನ್ನಾಟ, ಮಲ್ಲಿಕಾರ್ಜುನ ಸ್ವಾಮಿ ಗುಡ್ಡದ ಮೇಲೆ ಮದ್ದು ಹಾರಿಸುವ ಕಾರ್ಯಕ್ರಮ ಜರುಗಲಿದೆ.
ಜುಲೈ 2ರಂದು ದ್ಯಾಮವ್ವ ದೇವಿಯರನ್ನು ರಥದಲ್ಲಿ ಕೂಡ್ರಿಸುವುದು, ಬಳಿಕ ಸೋಮವಾರ ಪೇಟೆಯಿಂದ ಎರಡು ರಥಗಳು ದ್ಯಾಮವ್ವ ದೇವಿಯ ಗುಡಿಯನ್ನು ತಲುಪುವವು. 3ರಂದು ಉಭಯ ರಥಗಳನ್ನು ಹಳೆಯ ಮುನ್ಸಿಪಲ್ ಕಚೇರಿ, ಚಾವಡಿ ರಸ್ತೆ ಮೂಲಕ ಒಂದು ರಥ ಅಜಂತಾ ಖೂಟ್ ತಲುಪುವುದು ಹಾಗೂ ಮತ್ತೊಂದು ರಥವು ಬಾಫನಾ ಖೂಟ್ ತಲುಪಲಿದೆ.
4ರಂದು ಒಂದು ರಥವನ್ನು ಬಾಫನಾ ಖೂಟ್‌ದಿಂದ ಗುರುವಾರ ಪೇಟೆಯ ಮಹಾಲಕ್ಷ್ಮಿ ದೇವಿ ಮಂದಿರಕ್ಕೆ ತಲುಪುವುದು. ಅಂದೇ ಎರಡನೇ ರಥವು ಅಜಂತಾ ಖೂಟ್‌ದಿಂದ ಯಾತ್ರೆ ಮುಂದುವರೆಸಿ ಬಸವೇಶ್ವರ ವೃತ್ತ ಮಾರ್ಗವಾಗಿ ಮೆರಕನಟ್ಟಿಯ ಮಹಾಲಕ್ಷ್ಮಿ ದೇವಿಯ ಗುಡಿಯನ್ನು ತಲುಪಲಿದೆ.
5ರಂದು ದೇವರ ಹೆಸರಿಗೆ ಬಿಡಲಾಗಿರುವ ಕೋಣಗಳನ್ನು ಉಭಯ ಮಂದಿರಗಳಿಗೆ ತಲುಪಿಸುವುದು. 6ರಂದು, ಭಾರಿ ಜೋಡೆತ್ತಿನ ಶರ್ಯತ್ತು, 7ರಂದು ಸೈಕಲ್ ಮತ್ತು ಜೋಡು ಕುದುರೆ ಶರ್ಯತ್ತು ಜರುಗಲಿವೆ.
8ರಂದು ಪುರಜನರಿಂದ ಗ್ರಾಮದ ಎಲ್ಲ ದೇವಾಲಯಗಳಿಗೆ ನೈವೇದ್ಯ ಸಮರ್ಪಣೆ.
ವಾಡಿಕೆಯಂತೆ ಜಾತ್ರಾ ಮಹೋತ್ಸವ ಸಂಪನ್ನಗೊಂಡ ಮೂರು ದಿನಗಳ ಬಳಿಕ ಉಭಯ ರಥಗಳ ಕಳಶವನ್ನು ಕೆಳಗಿಳಿಸುವ ಕಾರ್ಯ11 ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.