
ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಕೇಂದ್ರಿತವಾಗಿ ಹೊಸ ಜಿಲ್ಲೆ ರಚನೆ ಮಾಡಬೇಕು. ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಗೋಕಾಕ ನಗರವನ್ನು ಹೊಸ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ, ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕರ್ನಾಟಕ ರಾಜ್ಯ ಶಾಖೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
‘ಈ ಬಗ್ಗೆ ನಾಲ್ಕು ದಶಕಗಳಿಂದ ಹಲವು ಸಂಘ–ಸಂಸ್ಥೆಯವರು ಮತ್ತು ಸಾರ್ವಜನಿಕರು ಹೋರಾಟ ನಡೆಸುತ್ತ ಬಂದಿದ್ದಾರೆ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋಕಾಕ ಜಿಲ್ಲೆ ಘೋಷಿಸಿ ಆದೇಶ ಹೊರಡಿಸಿದ್ದರು. ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸುವಂತೆ ಮೂರು ಆಯೋಗದವರು ಸಹ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈವರೆಗೂ ಅದು ಈಡೇರಿಲ್ಲ’ ಎಂದು ದೂರಿದರು.
‘ಐದಾರು ತಾಲ್ಲೂಕು ಕೇಂದ್ರಗಳಿಗೆ ಕೇಂದ್ರಸ್ಥಳವಾಗಿ ಗೋಕಾಕ ನಗರವಿದ್ದು, 1.50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಹಾಗಾಗಿ ಗೋಕಾಕ ಜಿಲ್ಲಾಕೇಂದ್ರವಾಗಿ ಇದೇ ಚಳಿಗಾಲದ ಅಧಿವೇಶನದಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಅಶೋಕ ಪೂಜಾರಿ, ಇಮ್ರಾನ್ ತಪಕೀರ, ಶಬ್ಬೀರ್ ಮುಜಾವರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.