ಗೋಕಾಕ: ಒಟ್ಟು 31 ಚುನಾಯಿತ ಸದಸ್ಯರನ್ನು ಹೊಂದಿರುವ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ 'ಬ'ಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮೀಸಲಿಡಲಾಗಿದ್ದು, ಎರಡೂ ಸ್ಥಾನಗಳಿಗೆ ಆ.30ರಂದು ಮಧ್ಯಾಹ್ನ 2ಕ್ಕೆ ಚುನಾವಣೆ ನಡೆಯಲಿದೆ.
ಒಟ್ಟು ಚುನಾಯಿತ ಸದಸ್ಯರ ಪೈಕಿ 26 ಸದಸ್ಯರು ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದರೆ. ಇನ್ನುಳಿದ ಐವರು ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅರ್ಹತೆಯುಳ್ಳ ಚುನಾಯಿತ ಸದಸ್ಯರು ತಮ್ಮ-ತಮ್ಮ ಪ್ರಮುಖರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮೂಲಕ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಗರಸಭೆಯ ಸದಸ್ಯರ ಸಭೆ ಕರೆದಿದ್ದು, ಅಲ್ಲಿ ಯಾರನ್ನು ಯಾವ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.
ಚುನಾವಣಾ ಅಧಿಕಾರಿಯಾಗಿ ಬೈಲಹೊಂಗಲ ಉಪ-ವಿಭಾಗಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ನಾಮಪತ್ರ ಸಲ್ಲಿಸುವುದು, ಮಧ್ಯಾಹ್ನ 2ಕ್ಕೆ ನಾಮಪತ್ರಗಳ ಪರಿಶೀಲನೆ, ಮಧ್ಯಾಹ್ನ 2-15 ರಿಂದ 2-30 ವರೆಗೆ ನಾಮಪತ್ರ ಹಿಂತೆಗೆದುಕೊಳ್ಳುವುದು. ಅಗತ್ಯ ಬಿದ್ದಲ್ಲಿ ಮಧ್ಯಾಹ್ನ 2.30ಕ್ಕೆ ಮತದಾನ ನಡೆದು ಸಂಜೆ ಚುನಾವಣೆ ಫಲಿತಾಂಶ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.