ADVERTISEMENT

ಗೋಕಾಕದ ಕೆಎಲ್‌ಇ ಆಸ್ಪತ್ರೆ ಮೇಲ್ದರ್ಜೆಗೆ

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:07 IST
Last Updated 26 ಜನವರಿ 2022, 16:07 IST
ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಗೋಕಾಕದ ಕೆಎಲ್‌ಇ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ವೃತ್ತಿಗೆ ಬುಧವಾರ ಸ್ವಾಗತಿಸಿದರು
ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಗೋಕಾಕದ ಕೆಎಲ್‌ಇ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ವೃತ್ತಿಗೆ ಬುಧವಾರ ಸ್ವಾಗತಿಸಿದರು   

ಬೆಳಗಾವಿ: ‘ಮುಂದಿನ ವರ್ಷದಿಂದ ಗೋಕಾಕ ನಗರದಲ್ಲಿ ಕೆಎಲ್‌ಇ ಸಂಸ್ಥೆಯಿಂದ ಸಕಲ ವ್ಯವಸ್ಥೆಗಳು ಒಳಗೊಂಡ ಆಸ್ಪತ್ರೆಯು ತಲೆ ಎತ್ತಲಿದೆ. ಮೇಲ್ದರ್ಜೆಗೇರಿಸಲು ಎಲ್ಲ ತಯಾರಿಯನ್ನೂ ಮಾಡಲಾಗುತ್ತಿದೆ. ಉನ್ನತ ಶಿಕ್ಷಣದ ಕೇಂದ್ರಗಳು ಕೂಡ ಮುಂಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿವೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪ್ರಕಟಿಸಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಗೋಕಾಕದ ಕೆಎಲ್‌ಇ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ನರ್ಸಿಂಗ್‌ ಸೇವಾ ವೃತ್ತಿಗೆ ಸ್ವಾಗತಿಸಿ ಬುಧವಾರ ಅವರು ಮಾತನಾಡಿದರು.

‘ಗೋಕಾಕ ಭಾಗದ ಜನತೆಗೆ ಶೈಕ್ಷಣಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಬಿ.ಎಸ್ಸಿ. ನರ್ಸಿಂಗ್‌, ಬಿಬಿಎ, ಬಿಸಿಎ ಸೇರಿದಂತೆ ಪದವಿ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಅಲ್ಲದೇ ಈಗಿರುವ ಆಸ್ಪತ್ರೆಯ ಜೊತೆಗೆ ಸಕಲ ವಿಭಾಗಗಳನ್ನೊಳಗೊಂಡ ದೊಡ್ಡದಾದ ಆಸ್ಪತ್ರೆ ಪ್ರಾರಂಭಿಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಕೆಎಲ್‌ಇ ಹುಟ್ಟಿದ್ದೇ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಲು. 34 ವರ್ಷಗಳ ಹಿಂದೆ ನರ್ಸಿಂಗ್‌ ಕಾಲೇಜು ಪ್ರಾರಂಭಿಸಿದಾಗ ಈ ಭಾಗದ ವಿದ್ಯಾರ್ಥಿಗಳು ನರ್ಸಿಂಗ್‌ ಕಲಿಯಲು ಮುಂದೆ ಬರಲಿಲ್ಲ. ಇದರ ಅನುಕೂಲವನ್ನು ಕೇರಳದವರು ಪಡೆದರು. ಇದು ಕೀಳಲ್ಲ. ವೈದ್ಯರ ನಂತರ ಅತಿ ಹೆಚ್ಚು ಬೇಡಿಕೆಯುಳ್ಳ ವೃತ್ತಿ ಇದು. ಅದರ ಮಹತ್ವ ಈಗ ಎಲ್ಲರಿಗೆ ತಿಳಿದಿದೆ’ ಎಂದರು.

‘ಇಲ್ಲಿ ಕಲಿತ ಮತ್ತು ಸೇವೆ ಸಲ್ಲಿಸಿದವರು ಜಗತ್ತಿನ ಯಾವುದೇ ದೇಶದಲ್ಲಿ ಸೇವೆ ಸಲ್ಲಿಸಬಹುದು. ನಿಮ್ಮ ಸೇವೆ ಮತ್ತು ಕಾರ್ಯದಿಂದ ರೋಗಿಯು ಗುಣಮುಖವಾಗಬೇಕು. ನಗುಮುಖದಿಂದ ಸೇವೆ ನೀಡಿದರೆ, ರೋಗಿಯು ಶೀಘ್ರ ಗುಣಮುಖವಾಗುತ್ತಾನೆ. ಅತಿ ಗೌರವದ ಕಾರ್ಯವಿದು’ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಜಯಣ್ಣ (ರಾಜು) ಮುನವಳ್ಳಿ, ‘ಗೋಕಾಕದಲ್ಲಿ ನರ್ಸಿಂಗ್‌ ಕಾಲೇಜು ಸ್ಥಾಪನೆಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಆ ಭಾಗದ ಗ್ರಾಮೀಣ ಮಕ್ಕಳಿಗೆ ಒಳ್ಳೆಯ ಉದ್ಯೋಗ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿ ವರ್ಷ ಆ ಭಾಗದ 200 ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು ಉದ್ದೇಶಿಸಲಾಗಿದೆ. ಬಿ.ಎಸ್ಸಿ. ಮತ್ತು ಬಿಬಿಎ ಪ್ರಾರಂಭ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ‘ಶುಶ್ರೂಷಕರು ವಿವಿಧ ವಿಭಾಗಗಳಲ್ಲಿ ಅನುಭವ ಪಡೆದು ಮನಪೂರ್ವಕವಾಗಿ ಸೇವೆ ಸಲ್ಲಿಸಬೇಕು. ರೋಗಿಗಳೊಂದಿಗೆ ಒಳ್ಳೆಯ ಸಂವಹನ ಇರಬೇಕು. ನಾಚಿಕೆ ಮತ್ತು ಭಯ ಬಿಡಬೇಕು. ರೋಗಿಗಳ ಸೇವೆ ಅತ್ಯಂತ ಶ್ರೇಷ್ಠವಾದುದು‘ ಎಂದು ಹೇಳಿದರು.

ಗೋಕಾಕದ ಕೆಎಲ್‌ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಆನಂದ ಎಚ್. ಸ್ವಾಗತಿಸಿದರು. ಡಾ.ಸುಧಾ ರೆಡ್ಡಿ ವಂದಿಸಿದರು.

ಕೀಳರಿಮೆ ಬೇಡ

ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂಬ ಕೀಳಿರಿಮೆ ಬೇಡ. ಮಾತೃ ಭಾಷೆ ಬಂದರೆ ಸಾಕು. ಅದರಿಂದಲೇ ರೋಗಿಯೊಂದಿಗೆ ಸಂವಹನ ನಡೆಸಬಹುದು.

–ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.