ಚಿತ್ರ: 12ಜಿಕೆಕೆ2 ಗೋಕಾಕದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಜರುಗಿದ ಬೃಹತ್ ಲೋಕಅದಾಲತ್ʼನಲ್ಲಿ ಕಕ್ಷೀಗಾರರು ಮತ್ತು ಅವರ ವಕೀಲರ ಸಮ್ಮುಖದಲ್ಲಿ ಪ್ರಕರಣಗಳ ರಾಜಿ ಸಂಧಾನ ಪ್ರಕ್ರಿಯೆ ನಡೆಸಿದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ಕಾನಟ್ಟಿ ಅವರು.
ಗೋಕಾಕ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರು ಕಕ್ಷಿದಾರರೊಂದಿಗೆ ನಡೆಸಿದ ರಾಜಿ ಸಂಧಾನ ಪ್ರಕ್ರಿಯೆಯ ಫಲವಾಗಿ ವಿಚಾರಣಾ ಹಂತದಲ್ಲಿದ್ದ (ಮೂಡಲಗಿ ನ್ಯಾಯಾಲಯದ 1,523 ಪ್ರಕರಣಗಳು ಒಳಗೊಂಡಂತೆ) 3,350 ಹಾಗೂ ವಿಚಾರಣಾ ಪೂರ್ವ ಹಂತದ 33,255 ಸೇರಿದಂತೆ ಒಟ್ಟು 36,605 ಪ್ರಕರಣಗಳು ಶನಿವಾರ ಇತ್ಯರ್ಥಗೊಂಡಿವೆ.
ಈ ಕುರಿತು ಇಲ್ಲಿನ ಗೋಕಾಕ್ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ ಆತ್ನೂರೆ ಅವರು ಬಿಡುಗಡೆಗೊಳಿಸಿರುವ ಪ್ರತಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ಯರ್ಥಗೊಂಡ ಪ್ರಕರಣಗಳ ಪೈಕಿ ವಿಚಾರಣಾ ಹಂತದ ಹನ್ನೆರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ 5, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ 13, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ 15, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ 8, ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯದ 364, 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 824, 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 598 ಮತ್ತು ಮೂಡಲಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ 1,523 ಪ್ರಕರಣಗಳಾಗಿವೆ. ಇವುಗಳಲ್ಲಿ ವಿಚಾರಣಾ ಹಂತದ ಚೆಕ್ ಬೌನ್ಸ್, ಜೀವನಾಂಶ, ವೈವಾಹಿಕ ಜೀವನಕ್ಕೆ ಸಂಬಂಧಿಸಿದ, ವಾಹನ ಅಪಘಾತ ಪರಿಹಾರ ಪ್ರಕರಣಗಳು, ಸ್ಥಿರಾಸ್ತಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ವಿಚಾರಣಾ ಪೂರ್ವ ಹಂತದ ಬ್ಯಾಂಕ್, ದೂರವಾಣಿ, ವಿದ್ಯುತ್, ನೀರು ಮೊದಲಾದವುಗಳ ಬಾಕಿ ಮೊತ್ತ ವಸೂಲಾತಿ, ಹೀಗೆ ಇನ್ನೂ ಅನೇಕ ರೀತಿಯ ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.