ADVERTISEMENT

ಗೋಲ ಗುಮ್ಮಟಗಳಿಗೆ ಹೊಸ ರೂಪ; ₹1.5 ಕೋಟಿ ವೆಚ್ಚದಲ್ಲಿ ಜೀರ್ಣೊದ್ಧಾರ

ಎನ್.ಪಿ.ಕೊಣ್ಣೂರ
Published 10 ಮೇ 2019, 20:00 IST
Last Updated 10 ಮೇ 2019, 20:00 IST
ಹುಕ್ಕೇರಿಯ ಗುಮ್ಮಟದ ಹಿಂದಿನ ನೋಟ(ಎಡ ಚಿತ್ರ), ಈಗ ಹೀಗಾಗಿದೆ.
ಹುಕ್ಕೇರಿಯ ಗುಮ್ಮಟದ ಹಿಂದಿನ ನೋಟ(ಎಡ ಚಿತ್ರ), ಈಗ ಹೀಗಾಗಿದೆ.   

ಹುಕ್ಕೇರಿ: ಇಲ್ಲಿರುವ ಗೋಲಗುಮ್ಮಟಗಳಿಗೆ ಕಾಯಕಲ್ಪ ನೀಡಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ವಿಜಯಪುರ ಹೊರತುಪಡಿಸಿದರೆ ಅತಿ ಹೆಚ್ಚು ಗೋಲಗುಮ್ಮಟಗಳನ್ನು ಹೊಂದಿರುವ ಪಟ್ಟಣವೆಂಬ ಖ್ಯಾತಿ ಹುಕ್ಕೇರಿಯದು. ಪಿಕಾರ್ಡ್‌ ಬ್ಯಾಂಕ್‌ ಬಳಿಯಲ್ಲಿರುವ ಈ ಗುಮ್ಮಟಗಳಿಗೆ ಇತ್ತೀಚೆಗೆ ಹೊಸ ರೂಪ ನೀಡಲಾಗಿದೆ.

ಆದಿಲ್ ಶಾಹಿಗಳ ನಂತರ ಬ್ರಿಟಿಷರು ಇವುಗಳನ್ನು ಪ್ರವಾಸಿ ಮಂದಿರಗಳಾಗಿ ಬಳಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ನಂತರವೂ ಪ್ರವಾಸಿ ಮಂದಿರಗಳಾಗಿದ್ದ ಇವು ಪುರಸಭೆ ಸುಪರ್ದಿಗೆ ಬಂದ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ನಿರ್ವಹಣೆ ಇಲ್ಲದೇ ಬಳಲುತ್ತಿದ್ದವು. ಪುಂಡರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದುದ್ದೂ ಕಂಡುಬಂದಿತ್ತು.

ADVERTISEMENT

ಇದನ್ನು ತಡೆಗಟ್ಟಲು ಶಾಸಕ ಉಮೇಶ ಕತ್ತಿ ಒದಗಿಸಿದ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯವರು ಪುನರುಜ್ಜೀವನ ಯೋಜನೆ ಕೈಗೊಂಡಿದ್ದಾರೆ. ಎಇಇ ಎನ್‌.ವಿ. ಪಾಟೀಲ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆದಿದ್ದು, ಗುಮ್ಮಟಗಳು ಗತವೈಭವ ಸಾರುತ್ತಿವೆ. ಜನರ ಗಮನಸೆಳೆಯುತ್ತಿವೆ.

ಮೂರು ಗುಮ್ಮಟಗಳು ಒಂದೇ ಕಡೆ ಇದ್ದರೂ ಒಂದರ ನರೆಳು ಮತ್ತೊಂದರ ಮೇಲೆ ಬೀಳದಂತೆ ವಿನ್ಯಾಸ ಮಾಡಿರುವುದು ವಿಶೇಷ. ಆದಿಲ್ ಶಾಹಿ ಕಾಲದಲ್ಲಿ ಉತ್ತಮ ಗುಣಮಟ್ಟದ ಗುಲಾಬಿ ಬೆಳೆಯುತ್ತಿದ್ದರಿಂದ ಪಟ್ಟಣವು ‘ಹೂವಿನ ಕೇರಿ’ ಎಂದು ಹೆಸರು ಪಡೆದಿತ್ತು. 1502ರಲ್ಲಿ ಯುಸುಫ್ ಆದಿಲ್ ಶಾ ಅವರು ಐನ್ ಉಲ್ ಮುಲ್ಕ್ ಗಿಲಾನಿ ಮೂಲಕ ಆಡಳಿತ ನಡೆಸುತ್ತಿದ್ದರು. ಅವರ ಕಾಲದಲ್ಲಿ ಹುಕ್ಕೇರಿ ಕೋಟೆ ಮತ್ತು ಇಂಡೋ– ಅರೇಬಿಕ್ ಶೈಲಿಯಲ್ಲಿ ನಿರ್ಮಾಣವಾದ ಗೋಲಗೊಮ್ಮಟಗಳಿವು. ಇವು ಐತಿಹಾಸಿಕ ಸ್ಮಾರಕಗಳಾಗಿವೆ.

‘ಗುಮ್ಮಟಗಳನ್ನು ₹ 1.5 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದೇವೆ. ಸುತ್ತಲೂ ಫೆನ್ಸಿಂಗ್ ಅಳವಡಿಸಲಾಗಿದೆ. ಪ್ರವಾಸಿಗರು ಕುಳಿತುಕೊಂಡು ಸೌಂದರ್ಯ ಸವಿಯಲು ಅನುವಾಗುವಂತೆ ಆಸನಗಳನ್ನು ಹಾಕುತ್ತಿದ್ದೇವೆ. ಈ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಅಧೀನಕ್ಕೆ ಪಡೆದುಕೊಂಡು ನಿರ್ವಹಿಸಿದರೆ, ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ವಿ.ಎನ್. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.