ADVERTISEMENT

ಸರ್ಕಾರದಿಂದಲೇ ಚಿನ್ನಾಭರಣ ತಯಾರಿಕೆ, ಮಾರಾಟಕ್ಕೆ ಮಳಿಗೆ: ಸಚಿವ ನಿರಾಣಿ

ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 13:16 IST
Last Updated 15 ಮಾರ್ಚ್ 2021, 13:16 IST
ಗಣಿ ಸಚಿವ ಮುರೇಗೇಶ್‌ ನಿರಾಣಿ
ಗಣಿ ಸಚಿವ ಮುರೇಗೇಶ್‌ ನಿರಾಣಿ    

ಬೆಳಗಾವಿ: ‘ಮೈಸೂರು ರೇಷ್ಮೆ ಸೀರೆ, ಮೈಸೂರು ಸಾಬೂನು ಉತ್ಪನ್ನವನ್ನು ಬ್ರ್ಯಾಂಡ್ ಮಾಡಿದಂತೆಯೇ ಮತ್ತು ಮಳಿಗೆಗಳನ್ನು ತೆರೆದು ಮಾರುತ್ತಿರುವಂತೆಯೇ ಸರ್ಕಾರದಿಂದ ಚಿನ್ನಾಭರಣಗಳನ್ನು ತಯಾರಿಸಿ ಮಾರಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲ್ಲಿ ಭಾನುವಾರ ಮಾತನಾಡಿದ ಅವರು, ‘100 ವರ್ಷದ ಹಿಂದೆ ಪ್ರಾರಂಭವಾಗಿರುವ ಹಟ್ಟಿ ಚಿನ್ನದ ಗಣಿಯಲ್ಲಿನ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಪ್ರಸ್ತುತ 1,700 ಕೆ.ಜಿ. ಉತ್ಪಾದನೆ ಮಾಡುತ್ತಿದೆ. ಅದನ್ನು 2 ಹಂತಗಳಲ್ಲಿ 5ಸಾವಿರ ಕೆ.ಜಿ.ಗೆ. ಹೆಚ್ಚಿಸಲು ನಿರ್ಧರಿಸಲಾಗಿದೆ. ನಾವೀಗ ಚಿನ್ನವನ್ನಷ್ಟೆ ಮಾಡಿ ಮಾರುತ್ತಿದ್ದೇವೆ. ಅದರ ಮೌಲ್ಯವರ್ಧನೆ ಮಾಡಿ ಆಭರಣಗಳನ್ನು ಕೂಡ ಸರ್ಕಾರದಿಂದ ಮಾರುವುದಕ್ಕೆ ಅವಕಾಶವಿದೆ’ ಎಂದರು.

‘ಹಟ್ಟಿ ಚಿನ್ನದ ಗಣಿಗೆ ಹೋದ ವಾರ ಭೇಟಿ ನೀಡಿದ್ದೆ. ಅಲ್ಲಿ ಪ್ರತಿ ವರ್ಷ ₹ 250 ಕೋಟಿ ಲಾಭ ಬರುತ್ತಿದೆ. ಅದನ್ನು ಹೂಡಿಕೆ ಮಾಡಿದರೆ ಉತ್ಪಾದನೆಯ ಪ್ರಮಾಣ ಹೆಚ್ಚಿಸಬಹುದಾಗಿದೆ. ನಮ್ಮಲ್ಲಿ ಗಣಿ ಇದೆ. ತಂತ್ರಜ್ಞಾನವಿದೆ. ತಯಾರಿಸಿದ ಚಿನ್ನಕ್ಕೆ ಮಾರುಕಟ್ಟೆಯೂ ಇದೆ. ಅದನ್ನು ಬಳಸಿಕೊಳ್ಳಲಾಗುವುದು. ಬ್ರ್ಯಾಂಡ್ ಮಾಡುವುದರಿಂದ ಕರ್ನಾಟಕವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಿದಂತೆಯೂ ಆಗುತ್ತದೆ’ ಎಂದರು.

ADVERTISEMENT

‘ಇಲಾಖೆಯಿಂದ ಬಂಗಾರದ ಆಭರಣಗಳನ್ನು ತಯಾರಿಸಲಾಗುವುದು. ಇದರಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಉದ್ಯೋಗ ಕೊಟ್ಟಂತಾಗುತ್ತದೆ. ಚಿನ್ನದ ಮೌಲ್ಯವರ್ಧನೆ ಮಾಡಿದಂತೆಯೂ ಆಗುತ್ತದೆ. ಹಟ್ಟಿ ಗೋಲ್ಡ್ ಮೈನ್ ಹೆಸರನ್ನು ‘ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್’ ಎಂದು ಬದಲಾವಣೆ ಮಾಡಲಾಗುವುದು. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ‘ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್’ ಹೆಸರಿನ ಚಿನ್ನಾಭರಣ ಮಳಿಗೆಗಳನ್ನು ತೆರೆಯುವ ವಿಚಾರವೂ ಇಲಾಖೆಯದಾಗಿದೆ’ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ ಇರುವಷ್ಟು ಖನಿಜ ಸಂಪತ್ತು ಬೇರೆಯಲ್ಲೂ ಇಲ್ಲ. ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.