ADVERTISEMENT

ನನ್ನ ಮಾತು ಕೇಳದಿರುವುದಕ್ಕೆ ಸಮ್ಮಿಶ್ರ ಸರ್ಕಾರ ಪತನ: ಸತೀಶ ಜಾರಕಿಹೊಳಿ

‘ರಮೇಶ್‌ಕುಮಾರ್‌ ನೀಡಿರುವ ತೀರ್ಪು ಸ್ವಾಗತಾರ್ಹ, ಪಕ್ಷಾಂತರ ಮಾಡುವವರಿಗೆ ಪಾಠ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 14:03 IST
Last Updated 28 ಜುಲೈ 2019, 14:03 IST
ಶಾಸಕ ಸತೀಶ ಜಾರಕಿಹೊಳಿ ಅವರು ಅಥಣಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಭೇಟಿಯಾದರು
ಶಾಸಕ ಸತೀಶ ಜಾರಕಿಹೊಳಿ ಅವರು ಅಥಣಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಭೇಟಿಯಾದರು   

ಅಥಣಿ: ‘ನನ್ನ ಮಾತು ಕೇಳದಿರುವುದಕ್ಕೆ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಕೆಲವರು ರಾಜೀನಾಮೆ ನೀಡುವ ಹಾಗೂ ಆಪರೇಷನ್‌ ಕಮಲ ನಡೆಯುತ್ತಿರುವ ಕುರಿತು 3 ತಿಂಗಳುಗಳ ಹಿಂದೆಯೇ ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೆ. ಅದು ಈಗ ನಿಜವಾಗಿದೆ. ಈ ನಡುವೆ. ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಆರ್‌. ರಮೇಶ್‌ಕುಮಾರ್‌ ನೀಡಿರುವ ತೀರ್ಪು ಸ್ವಾಗತಾರ್ಹ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಮುಂಬರುವ ಉಪ ಚುನಾವಣೆಯಲ್ಲಿ ಪಕ್ಷದ ಎಲ್ಲ ಮುಖಂಡರೂ ಸೇರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಒಗ್ಗಟ್ಟಾಗಿ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಹೈಕಮಾಂಡ್‌ ಸೂಚಿಸಿದಂತೆ ನಾವು ಕಾರ್ಯನಿರ್ವಹಿಸುತ್ತೇವೆ. ಜೆಡಿಎಸ್‌ ಪಕ್ಷದಿಂದ ನೀಡಿದ, ಋಣ ಮುಕ್ತ ಕಾನೂನು ಜಾರಿ ಜಾಹೀರಾತಿನಲ್ಲಿ ಕಾಂಗ್ರೆಸ್‌ ಪಕ್ಷದ ಉಲ್ಲೇಖ ಇರಲಿಲ್ಲ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಅಥಣಿ ಶಾಸಕರು ನನ್ನ ಮತ್ತು ರಮೇಶ ಜಾರಕಿಹೊಳಿ ಇಬ್ಬರ ನಾಯಕತ್ವವನ್ನೂ ಒಪ್ಪಿದವರು. ಕೊನೆ ಕ್ಷಣದಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಹೋಗಿದ್ದಾರೆ. ಅವರನ್ನು ಸಂಧಾನ ಮಾಡಿ ಕರೆಸುವ ಇಚ್ಛೆ ಇತ್ತು. ಕಾಗವಾಡ ಶಾಸಕರು ಹೋಗಿರುವುದೇ ಆಶ್ಚರ್ಯವಾಗಿದೆ. ಅವರು ಅತೃಪ್ತರೊಂದಿಗೆ ಕೈಜೋಡಿಸುವ ಮನಸ್ಥಿತಿಯಲ್ಲಿ ಇರಲಿಲ್ಲ’ ಎಂದರು.

‘ನನ್ನ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಪ-ಚುನಾವಣೆ ಬಂದಾಗ ಇಬ್ಬರೂ ಕೂಡಿ ಕೆಲಸ ಮಾಡಿ ಎಂದು ಹೈಕಮಾಂಡ್‌ ಸೂಚಿಸಿದರೆ ಅದರಂತೆ ದುಡಿಯುತ್ತೇವೆ. ಎಲ್ಲ ಅಭ್ಯರ್ಥಿಗಳನ್ನೂ ಗೆಲ್ಲಿಸಿ ತೋರಿಸುತ್ತೇವೆ’ ಎಂದು ಹೇಳಿದರು.

‘ಆಪರೇಷನ್ ಕಮಲ ಬಿಜೆಪಿಗೇ ಮುಳುವಾಗಲಿದೆ. ಆಪರೇಷನ್‌ಗೆ ಒಳಗಾದವರಿಂದಲೇ ಸರ್ಕಾರ ಬೀಳಬಹುದು. ಬಿಜೆಪಿ ಸರ್ಕಾರಕ್ಕೆ ಬಹಳ ಆಯಸ್ಸಿಲ್ಲ’ ಎಂದರು.

ಮುಖಂಡರಾದ ಗಜಾನನ ಮಂಗಸೂಳಿ, ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ, ಬಸವರಾಜ ಬುಟಾಳಿ, ಧರೆಪ್ಪ ಠಕ್ಕಣ್ಣವರ, ಸುನೀಲ ಸಂಕ, ಶಿವಾನಂದ ಗುಡ್ಡಾಪುರ, ನಿಶಾಂತ ದಳವಾಯಿ, ತೌಸಿಫ್‌ ಸಾಂಗಲೀಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.