ಬೆಳಗಾವಿ: ಮಹಿಳಾ ಸ್ವಸಹಾಯ ಗುಂಪುಗಳು ಸಿದ್ಧಪಡಿಸಿದ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ವಿಮಾನ ನಿಲ್ದಾಣ ಆವರಣದಲ್ಲಿ ಆರಂಭಿಸಿದ ಅವಸರ್(ಏರ್‌ಪೋರ್ಟ್ ಆ್ಯಸ್ ವೆನ್ಯೂ ಫಾರ್ ಸ್ಕಿಲ್ಡ್ ಆರ್ಟಿಸನ್ಸ್ ಆಫ್ ದಿ ರೀಜನ್–ಈ ಭಾಗದ ಕುಶಲಕರ್ಮಿಗಳಿಗೆ ವಿಮಾನನಿಲ್ದಾಣ ವೇದಿಕೆ) ಉಪಕ್ರಮಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಈ ಮಳಿಗೆ ತೆರೆಯಲು ಸ್ಥಳಾವಕಾಶ ಕಲ್ಪಿಸಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ನವೀಕರಿಸಿದ ಮಳಿಗೆಗೆ ಈಗ ಗ್ರಾಹಕರು ಭೇಟಿ ಕೊಟ್ಟು ತಮ್ಮಿಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. 2024ರ ಡಿ.18ರಿಂದ 2025ರ ಜ.22ರ ಅವಧಿಯಲ್ಲಿ(36 ದಿನಗಳಲ್ಲಿ) ₹1.72 ಲಕ್ಷ ಮೊತ್ತದ ವಸ್ತುಗಳು ಮಾರಾಟವಾಗಿವೆ.
ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಸಂಚರಿಸುವ ದೇಶ–ವಿದೇಶದ ಪ್ರಯಾಣಿಕರಿಗೆ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಜಿಲ್ಲೆಯ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ 2022ರ ಏ.18ರಂದು ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿತ್ತು.
ಆರಂಭದಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆಗಮನ ದ್ವಾರದ ಪಕ್ಕದಲ್ಲಿ(ಹೊರಗೆ) ಮಳಿಗೆ ಇತ್ತು. ಇಲ್ಲಿ ಪ್ರತಿ ಸ್ವಸಹಾಯ ಗುಂಪಿನವರಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ 15 ದಿನ ಅವಕಾಶ ಕೊಡಲಾಗುತ್ತಿತ್ತು. ಆದರೆ, ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗಲಿಲ್ಲ. ಒಂದುವೇಳೆ ಈ ಹಿಂದೆ ಗ್ರಾಹಕರು ಇಷ್ಟಪಟ್ಟಿದ್ದ ವಸ್ತುಗಳು ಬೇಕೆಂದರೂ ತ್ವರಿತವಾಗಿ ಸಿಗುತ್ತಿರಲಿಲ್ಲ.
ಹಾಗಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು, ನವೀಕೃತ ‘ಅವಸರ್’ ಮಳಿಗೆಯನ್ನು ವಿಮಾನ ನಿಲ್ದಾಣದ ಆವರಣದೊಳಗೆ ಸ್ಥಳಾಂತರಿಸಿದರು. ನಿಯಮ ಬದಲಿಸಿ, ಪ್ರತಿ ಸ್ವಸಹಾಯ ಸಂಘದ ಉತ್ಪನ್ನಗಳನ್ನು ನಿರಂತರವಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರು. ಹೊಸ ರೂಪ ಪಡೆದಿರುವ ಮಳಿಗೆ 2024ರ ಡಿಸೆಂಬರ್ 18ರಂದು ಉದ್ಘಾಟನೆಯಾಯಿತು. ಅದಾದ ನಂತರ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
‘ಅವಸರ್’ ಮಳಿಗೆ ಪ್ರಯಾಣಿಕರ ಅಗತ್ಯತೆ ಪೂರೈಸುತ್ತಿದೆ . ಇಲ್ಲಿ ಮಾರಾಟವಾಗುವ ಉತ್ಪನ್ನಗಳು ಕ್ಯೂಆರ್ ಕೋಡ್ ಡಿಜಿಟಲ್ ಬಿಲ್ಲಿಂಗ್ ಸೌಲಭ್ಯ ಒಳಗೊಂಡಿವೆಎಸ್.ತ್ಯಾಗರಾಜನ್ ನಿರ್ದೇಶಕ ಸಾಂಬ್ರಾ ವಿಮಾನ ನಿಲ್ದಾಣ
ನವೀಕೃತ ಮಳಿಗೆಯಲ್ಲಿನ ಉತ್ಪನ್ನಗಳ ಖರೀದಿಗೆ ಉತ್ತಮ ಸ್ಪಂದನೆ ಇದೆ. ಇದರಿಂದ ಸ್ವಸಹಾಯ ಸಂಘಗಳ ಸದಸ್ಯೆಯರ ಜೀವನೋಪಾಯಕ್ಕೂ ಅನುಕೂಲವಾಗಿದೆರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ
‘ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸುವವರು ಕಾಟನ್ ಬ್ಯಾಗ್ ಟ್ರಾವೆಲ್ ಬ್ಯಾಗ್ ಲ್ಯಾಪ್‌ಟಾಪ್ ಬ್ಯಾಗ್ ಕಸೂತಿ ಸೀರೆಗಳು ಕೌದಿಗಳು ಸಾವಯವ ಬೆಲ್ಲ ಮಣ್ಣಿನಿಂದ ತಯಾರಿಸಿದ ವಿವಿಧ ಕಲಾಕೃತಿ ಮತ್ತಿತರ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ವಿಶೇಷವಾಗಿ ವಿದೇಶಿಗರು ಈ ಮಳಿಗೆಯಲ್ಲಿನ ವಸ್ತುಗಳ ಖರೀದಿಗೆ ಒಲವು ತೋರುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.