ADVERTISEMENT

ಶಾಸಕರಿಗೆ ಅನುದಾನ ಬಿಡುಗಡೆಗೂ ಲಂಚ ಪಡೆಯುವ ಸರ್ಕಾರ: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 8:43 IST
Last Updated 19 ಅಕ್ಟೋಬರ್ 2020, 8:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ‘ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಕೊಡುತ್ತಿಲ್ಲ. ಹಿಂದೆ ನಿಗದಿಯಾಗಿದ್ದ ಅನುದಾನವನ್ನೂ ನಿಲ್ಲಿಸಿದ್ದಾರೆ. ಕಾರ್ಯಾದೇಶ ನೀಡಿರುವ ಕಾಮಗಾರಿಗಳಿಗೂ ದುಡ್ಡು ಬಿಡುಗಡೆ ಮಾಡಿಲ್ಲ. ಕೊಟ್ಟಿದ್ದನ್ನು ಕೂಡ ವಾಪಸ್ ತಗೆದುಕೊಂಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಮಾತನಾಡಿದ ಅವರು, ‘ಲೋಕೋಪಯೋಗಿ, ಜಲಸಂಪನ್ಮೂಲ, ಸಮಾಜಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಲಂಚ ಕೊಟ್ಟವರಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಇದೊಂದು ಪರ್ಸಂಟೇಜ್ ಸರ್ಕಾರ. ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೂ 3ನೇ ವ್ಯಕ್ತಿ ಹೋಗಿ ಲಂಚ ಕೊಟ್ಟು ಹಣ ಬಿಡುಗಡೆ ಮಾಡಿಸಿಕೊಂಡು ಬರುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಅನ್ನು ಜನ ಅರಬ್ಬಿ ಸಮುದ್ರಕ್ಕೆ ಬಿಸಾಕ್ತಾರೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಏನು ಮಾತಾಡಬೇಕು ಎನ್ನುವ ಅರಿವು ಅವರಿಗಿಲ್ಲ. ಕಾಂಗ್ರೆಸ್ ಅನ್ನು ಅರಬ್ಬಿ ಸಮುದ್ರಕ್ಕೆ ಹಾಕಲಾಗುತ್ತಾ? ಅತ್ಯಂತ ಹಳೆಯ ರಾಜಕೀಯ ‍ಪಕ್ಷವಿದ್ದರೆ ಅದು ಕಾಂಗ್ರೆಸ್. ಆಡಳಿತ ಪಕ್ಷದ ಅಧ್ಯಕ್ಷನಾಗಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು’ ಎಂದರು.

ADVERTISEMENT

ಸಿದ್ದರಾಮಯ್ಯ ಸರ್ಕಾರವಿದ್ದಾಗ 3ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಕಟೀಲ್ ಹೇಳಿಕೆಗೆ, ‘ಎಲ್ಲ ಕಾಲದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014ರಿಂದ 2016ರವರೆಗೆ ಭೀಕರ ಬರಗಾಲವಿತ್ತು. ಬೇಕಿದ್ದರೆ ಬಿಜೆಪಿ, ಜೆಡಿಎಸ್ ಶಾಸಕರಾಗಿದ್ದವರನ್ನೆ ಕೇಳಿ. ನಮ್ಮ ಕಾಲದಲ್ಲಿ ಯಾವತ್ತೂ ಅನುದಾನಕ್ಕೆ ಕೊರತೆ ಇರಲಿಲ್ಲ. ಇವರ ಕಾಲದಲ್ಲಿ ರೈತರು ಆತ್ಮಹತ್ಯೆ ನಿಂತು ಹೋಗಿದೆಯೇ? ಇವರು ಬಂದ ಮೇಲೆ ನಿಲ್ಲಿಸಿ ಬಿಡಬಹುದಿತ್ತಲ್ಲವೇ? ನೇಕಾರರು ಮತ್ತು ರೈತರ ಆತ್ಮಹತ್ಯೆ ಯಾಕಾಗುತ್ತಿದೆ ಎಂದು ಕಟೀಲ್ ಹೇಳಬೇಕಲ್ಲವೇ?’ ಎಂದು ಕೇಳಿದರು.

‘ನೇಕಾರರಿಗೆ ಪ್ಯಾಕೇಜ್ ಪ್ರಕಟಿಸಿದರು. ಇಂದಿನವರೆಗೂ ಕೊಟ್ಟಿಲ್ಲ. ಬಹಳ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಕೊಟ್ಟಿಲ್ಲ. ಈ ಸರ್ಕಾರದಲ್ಲಿ ದುಡ್ಡೇ ಇಲ್ಲ. ಕಾಮಗಾರಿ ಸ್ಥಗಿತಗೊಂಡಿರುವ ಸಮುದಾಯಗಳಿಗೆ ಅನುದಾನ ಕೊಡಿ ಎಂದು ಸಚಿವರಾಗಿದ್ದ ಬಿ.ಶ್ರೀರಾಮುಲು ಅವರನ್ನು ಕೇಳಿದ್ದೆ. ಒಂದು ರೂಪಾಯಿಯನ್ನೂ ಇಲಾಖೆಗೆ ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದರು’ ಎಂದು ತಿಳಿಸಿದರು.

‘ಪ್ರವಾಹದಲ್ಲಿ ಮನೆ ಕಳೆದುಕೊಂಡ ಯಾರಿಗೆ ಹಣ ಕೊಟ್ಟಿದ್ದಾರೆ ಹೇಳಲಿ’ ಎಂದು ಸವಾಲು ಹಾಕಿದರು. ‘ಕಷ್ಟದಲ್ಲಿ ಇರುವವರಿಗೆ ಹಣ ತಲುಪಬೇಕಲ್ಲವೇ? ಸುಳ್ಳು ಹೇಳುತ್ತಿದ್ದಾರೆ. ಇಂದಿನವರೆಗೂ ಕೇಂದ್ರ ಸರ್ಕಾರದವರು ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಬರುತ್ತೆ, ಬರುತ್ತೆ ಎಂದು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಟೀಕಿಸಿದರು.

ಕಾನೂನು ಉಲ್ಲಂಘಿಸುವುದೇ ಕಾಂಗ್ರೆಸ್‌ನ ದೊಡ್ಡ ಸಾಧನೆಯೇ ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾನೂನು ಪಾಲಿಸುವುದನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸಮಾಜದಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡೋರು ಅವರು’ ಎಂದು ತಿರುಗೇಟು ನೀಡಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಎರಡು ಗೋಲಿಬಾರ್ ಆಗಿವೆ. ಸತ್ತವರಾರು? ಡಿ.ಕೆ. ಹಳ್ಳಿ, ಕೆ.ಜಿ. ಹಳ್ಳಿ ಘಟನೆಗೆಯಲ್ಲಿ ಕಾಂಗ್ರೆಸ್‌ನ ಮಾಜಿ ಮೇಯರ್ ಸಂಪತ್‌ರಾಜ್ ಕೈವಾಡ ಇದೆ ಎನ್ನುವುದು ಸುಳ್ಳು ಆರೋಪ. ಆ ಘಟನೆಗೆ ಪೊಲೀಸರು, ಗುಪ್ತಚರ ಇಲಾಖೆಯವರ ವೈಫಲ್ಯ ಮತ್ತು ಸರ್ಕಾರದ ನಿರ್ಲಕ್ಷ್ಯ ಕಾರಣ’ ಎಂದು ಆರೋಪಿಸಿದರು.

‘ದೂರು ಕೊಟ್ಟ ತಕ್ಷಣ ಎಫ್ಐಆರ್ ಹಾಕಿ ಆರೋಪಿ ನವೀನ್ ಬಂಧಿಸಿದ್ದರೆ ಗಲಭೆ ನಡೆಯುತ್ತಿರಲಿಲ್ಲ. ಆ ಗಲಭೆ ಪೂರ್ವ ಯೋಜಿತ ಕೃತ್ಯ ಅಲ್ಲ. ತ್ವರಿತವಾಗಿ ಎಫ್‌ಐಆರ್‌ ದಾಖಲಿಸಲಿಲ್ಲವೆಂದು ಗಲಭೆ ನಡೆದಿದೆ’ ಎಂದು ದೂರಿದರು.

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌, ಮುಖಂಡರಾದ ಫಿರೋಜ್‌ ಸೇಠ್‌, ಅಶೋಕ ಪಟ್ಟಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.