ADVERTISEMENT

ಸರ್ಕಾರಿ ಮಹಿಳಾ ನೌಕರರ ಸದಸ್ಯತ್ವ ಅಭಿಯಾನ: ರೋಶಿನಿ ಗೌಡ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:57 IST
Last Updated 28 ಜನವರಿ 2026, 7:57 IST
ರೋಶಿನಿ ಗೌಡ
ರೋಶಿನಿ ಗೌಡ   

ಬೆಳಗಾವಿ: ‘ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಮಹಿಳಾ ನೌಕರರ ಶ್ರೇಯೋಭಿವೃದ್ಧಿಯೇ ಇದರ ಉದ್ದೇಶ. ಮಹಿಳಾ ನೌಕರರು ಹೆಚ್ಚು ಸದಸ್ಯತ್ವ ಪಡೆಯಬೇಕು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.

‘ಜ.12ರಂದು ಬೀದರ್‌ನಿಂದ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಜಿಲ್ಲೆಗೂ ತೆರಳಿ ಸಭೆಗಳನ್ನು ನಡೆಸಿ, ಸರ್ಕಾರಿ ಮಹಿಳಾ ನೌಕರರನ್ನು ಸಂಘಟಿಸಿ, ಜಾಗೃತಿಗೊಳಿಸಲಿದ್ದೇವೆ. ಫೆ. 12ರಂದು ಚಾಮರಾಜನಗರದಲ್ಲಿ ಅಭಿಯಾನ ಸಮಾರೋಪ ಆಗಲಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎ ದರ್ಜೆಯ ಅಧಿಕಾರಿಗಳಿಂದ ಹಿಡಿದು ಡಿ ದರ್ಜೆಯ ನೌಕರರವರೆಗೆ ಯಾರೆಲ್ಲರೂ ಈ ಸಂಘದಲ್ಲಿ ಸದಸ್ಯತ್ವ ಪಡೆಯಬಹುದು. ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಶ್ರಮಿಸುತ್ತಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಬೇಕು. ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಮಾಡಬೇಕು. ಮಾತೃತ್ವ ರಜೆ ಒಂದು ವರ್ಷದವರೆಗೆ ವಿಸ್ತರಿಸಬೇಕು. ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಮತ್ತು ಸೆಪ್ಟಂಬರ್ 13ರನ್ನು ಸರ್ಕಾರಿ ಮಹಿಳಾ ನೌಕರರ ದಿನ ಎಂದು ಘೋಷಿಸಬೇಕು. ವಿದೇಶಿ ಪ್ರವಾಸಕ್ಕಾಗಿ ನೌಕರರು ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ರಜೆ ಮಂಜೂರಾತಿ ಮಾಡಬೇಕು’ ಎಂದೂ ಅವರು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಖಜಾಂಚಿ ವೀಣಾ ಕೃಷ್ಣಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಅಂಗಡಿ, ಕಾರ್ಯದರ್ಶಿ ಎಂ.ಆಷಾರಾಣಿ, ಜಯಶ್ರೀ ಪಾಟೀಲ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.