ADVERTISEMENT

ಎನ್‌ಪಿಎಸ್‌ ರದ್ದತಿಗೆ ನೌಕರರ ಹಕ್ಕೊತ್ತಾಯ

ಸರ್ಕಾರದ ಮೇಲೆ ಒತ್ತಡ ಹೇರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 15:27 IST
Last Updated 21 ನವೆಂಬರ್ 2020, 15:27 IST
ಸಿ.ಎಸ್. ಷಡಕ್ಷರಿ
ಸಿ.ಎಸ್. ಷಡಕ್ಷರಿ   

ಬೆಳಗಾವಿ: ಮಾರಕವಾಗಿರುವ ಎನ್‌ಪಿಎಸ್ ರದ್ದುಪಡಿಸಬೇಕು. ಹಳೆಯ ‍ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.

– ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರೊಂದಿಗೆ ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಪ್ರಮುಖ ಹಕ್ಕೊತ್ತಾಯವಿದು.

‘ಕೇಂದ್ರದ ಮಾದರಿ ಸಮಾನ ವೇತನ ನಿಗದಿಪಡಿಸಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಬೇಕು. ಮುಖ್ಯಶಿಕ್ಷಕರಿಗೆ ವಿಶೇಷ ಬಡ್ತಿ ನೀಡಬೇಕು ಮತ್ತು ವಿಶೇಷ ವೇತನ ನಿಗದಿಪಡಿಸಬೇಕು. ಶೇ. 25ರಷ್ಟು ಹುದ್ದೆಗಳು ಖಾಲಿ ಇದ್ದರೆ ವರ್ಗಾವಣೆ ಇಲ್ಲ ಎನ್ನುವ ನಿಯಮ ತೆಗೆದು ಹಾಕಬೇಕು. ಪರಸ್ಪರ ವರ್ಗಾವಣೆಗೆ ವಿಧಿಸಿರುವ ಮಿತಿ ತೆಗೆಯಬೇಕು. ಹಿಂದಿ ಶಿಕ್ಷಕರಿಗೆ ಪ್ರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುದ್ದೆ ಸೃಜಿಸಬೇಕು. ಪದವೀಧರ ಶಿಕ್ಷಕರಿಗೆ ಸೇವಾ ಹಿರಿತನದೊಂದಿಗೆ ಪರೀಕ್ಷೆ ಇಲ್ಲದೆ ಎಜಿಟಿ ಹುದ್ದೆಗೆ (6ರಿಂದ 8ನೇ ತರಗತಿ) ಪದೋನ್ನತಿ ನೀಡಬೇಕು. ಶಿಕ್ಷಕರಿಗೆ ಡಿಡಿಪಿಐ ಹುದ್ದೆವರೆಗೂ ಬಡ್ತಿಗೆ ಅವಕಾಶ ಕಲ್ಪಿಸಬೇಕು. ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು ಮತ್ತು ಮುಖ್ಯಶಿಕ್ಷಕ ಹುದ್ದೆವರೆಗೆ ಬಡ್ತಿ ಕಲ್ಪಿಸಬೇಕು’ ಎಂದು ಶಿಕ್ಷಕರು ಆಗ್ರಹಿಸಿದರು.

ADVERTISEMENT

‘ನೌಕರರ ಸಂಘದಲ್ಲಿ ಶಿಕ್ಷಕರ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕು. ಎಚ್‌ಆರ್‌ಎಂಎಸ್ ಸಮಸ್ಯೆಗಳನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಷಡಕ್ಷರಿ ಮಾತನಾಡಿ, ‘ಎನ್‌ಪಿಎಸ್ ಕೈಬಿಡುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಹೋರಾಟ ನಡೆಯಬೇಕಿದೆ. ಜಿಲ್ಲೆಯಲ್ಲಿ ಮಹಿಳಾ ನೌಕರರರು ಗ್ರೀಟಿಂಗ್ ಕಾರ್ಡ್ ಹಾಗೂ ರಾಖಿ ಕಳುಹಿಸಿ ಭಾವನಾತ್ಮಕವಾಗಿ ಗಮನಸೆಳೆದಿರುವುದು ಮಾದರಿಯಾಗಿದೆ’ ಎಂದು ತಿಳಿಸಿದರು.

‘ಸರ್ಕಾರ ಘೋಷಣೆ ಮಾಡುವ ಬಜೆಟ್‌ನಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರಕಾರಿ ನೌಕರರದಾಗಿದೆ. ಇಂತಹ ಮಹತ್ವದ ಸೇವೆಯಲ್ಲಿರುವ ನೌಕರರ ಹಿತಾಸಕ್ತಿ ಕಾಪಾಡುವುದು ಸಂಘಟನೆಯ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶ್ರಮಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ ಮಾತನಾಡಿ, ‘ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಮಾರಕವಾಗಿದೆ. ಇದನ್ನು ಹಿಂಪಡೆದು ಹಳೆಯ ಯೋಜನೆ ಮುಂದುವರಿಸಬೇಕು ಎನ್ನುವ ಹೋರಾಟಕ್ಕೆ ಈ ಕಾರ್ಯಕ್ರಮ ವೇದಿಕೆ ಆಗಬೇಕು. ಮುಂಬರುವ ಚುನಾಚಣೆಯಲ್ಲಿ ಶಿಕ್ಷಕರ ಅಹವಾಲುಗಳಿಗೆ ದನಿಯಾಗುವ ಪ್ರಾಮಾಣಿಕ ಮತ್ತು ಸರ್ಕಾರದೊಂದಿಗೆ ಹೋರಾಡುವವರನ್ನು ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಸುರೇಶ ಶೆಡಶ್ಯಾಳ, ‘1.63 ಲಕ್ಷ ಶಿಕ್ಷಕರ ₹ 3 ಕೋಟಿ ಸದಸ್ಯತ್ವ ವಂತಿಗೆ ಎಲ್ಲಿದೆ, ಏನಾಗುತ್ತಿದೆ ಎನ್ನುವ ಮಾಹಿತಿ ಇಲ್ಲ’ ಎಂದು ಸಂಶಯ ವ್ಯಕ್ತಪಡಿಸಿದರು.

ಗೌರವಾಧ್ಯಕ್ಷ ವಿ.ವಿ. ಶಿವರುದ್ರಯ್ಯ, ಖಜಾಂಚಿ ಆರ್. ಶ್ರೀನಿವಾಸ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಶಂಭುಲಿಂಗಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.