ADVERTISEMENT

'ಹೊಸ ಬೆಳಕು' ಮೂಡಿಸಿದ ಸರ್ಕಾರಿ ಶಾಲೆ

308 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ

ಬಾಲಶೇಖರ ಬಂದಿ
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
ಮೂಡಲಗಿಯ ವಿದ್ಯಾನಗರ ಕನ್ನಡ ಸರ್ಕಾರಿ ಶಾಲೆಯ ನೋಟ
ಮೂಡಲಗಿಯ ವಿದ್ಯಾನಗರ ಕನ್ನಡ ಸರ್ಕಾರಿ ಶಾಲೆಯ ನೋಟ   

ಮೂಡಲಗಿ: ಇಲ್ಲಿನ ವಿದ್ಯಾನಗರದಲ್ಲಿ ಶಿಕ್ಷಣ ಇಲಾಖೆಯು 2007ರಲ್ಲಿ ‘ಕಲಿಕಾ ಖಾತ್ರಿ’ ಯೋಜನೆಯಲ್ಲಿ ಆರಂಭಿಸಿದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ 308 ಮಕ್ಕಳನ್ನು ಹೊಂದಿ ಇಲಾಖೆಗೆ ಹಿರಿಮೆಯ ಗರಿ ಮೂಡಿಸಿದೆ.

ಈ ಸ್ಥಳದಲ್ಲಿ ಕನ್ನಡ ಶಾಲೆ ನಡೆಯುವ ಖಾತ್ರಿ ಸ್ವತಃ ಇಲಾಖೆ ಅಧಿಕಾರಿಗಳಿಗೂ ಇರಲಿಲ್ಲ! ಏಕೆಂದರೆ ಹಲವು ದಶಕಗಳ ಪೂರ್ವದಲ್ಲಿ ಕೂಲಿಗಾಗಿ ಅಲೆಮಾರಿಗಳಾಗಿ ನೂರಾರು ಕುಟುಂಬಗಳು ಬಂದು ನೆಲೆಸಿದ ತಾಣವಿದು. ಅಕ್ಷರ, ಶಿಕ್ಷಣದ ಗಂಧ–ಗಾಳಿ ಇಲ್ಲದ ಕುಟುಂಬಗಳೇ ನೆಲೆಸಿದ್ದು ಒಂದೆಡೆಯಾದರೆ, ಉರ್ದು ಮಿಶ್ರಿತವಾದ ವಿಚಿತ್ರ ಭಾಷೆಯಲ್ಲಿ ಸ್ಥಳೀಯರಿಗೆ ಅರ್ಥವಾಗದ ರೀತಿಯಲ್ಲಿ ಮಾತನಾಡುವ ಸಮುದಾಯದವರು. ಈ ಪರಿಸರದಲ್ಲಿ ನಡೆದ ಪ್ರಯೋಗದಲ್ಲಿ, ಶಾಶ್ವತವಾಗಿ ನೆಲೆ ಕಂಡು ಮೂಡಲಗಿ ಸಿಆರ್‌ಪಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರವೇಶಾತಿ ಹೊಂದಿರುವ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಾಲಕರಲ್ಲೂ ಶಾಲೆ ಬಗ್ಗೆ ಗೌರವ ಹೆಚ್ಚಾಗಿದೆ.

ಪ್ರಾರ್ಥನೆ, ನೀತಿ ಕಥೆ, ಯೋಗ, ಸುದ್ದಿ ಸಮಾಚಾರ, ನಾಡು ನುಡಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ನಿತ್ಯದ ಪರಿಪಾಠ. ಕುವೆಂಪು, ಬೇಂದ್ರೆ, ಡಿ.ಎಸ್. ಕರ್ಕಿ ಅವರ ಪದ್ಯಗಳನ್ನು ಮಕ್ಕಳು ಸಲೀಸಾಗಿ ಒಪ್ಪಿಸುತ್ತಾರೆ.

ADVERTISEMENT

ಶಿಕ್ಷಣದ ಮಹತ್ವ:

1ರಿಂದ 7ರವರೆಗೆ ತರಗತಿಗಳಿದ್ದು, 8 ಜನ ಶಿಕ್ಷಕರಿದ್ದಾರೆ. ಮಕ್ಕಳ ದಾಖಲಾತಿಗಾಗಿ ಮನೆ–ಮನೆಗೆ ಭೇಟಿ ಕೊಡುವುದು, ಓಣಿಯಲ್ಲಿ ಜಾಥಾ, ಅಕ್ಷರಬಂಡಿ ಕಾರ್ಯಕ್ರಮದ ಮೂಲಕ ಶಿಕ್ಷಣ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಣಾಮ, ದಾಖಲಾತಿ ಹೆಚ್ಚುತ್ತಲಿದೆ.

ಅಡುಗೆ ಕೋಣೆ ಇದೆ. ಪುರಸಭೆಯಿಂದ ಕೊಳವೆಬಾವಿ ವ್ಯವಸ್ಥೆ ಇದೆ. ಶೌಚಾಲಯವಿದೆ. ಎಜ್ಯುಸ್ಯಾಟ್ ಸೌಲಭ್ಯ ಕಲ್ಪಿಸಲಾಗಿದೆ. ದೇಣಿಗೆ ಸಂಗ್ರಹಿಸಿ ನಿವೇಶನ ಖರೀದಿಸಲಾಗಿದೆ. ಸ್ಟೀಲ್ ಕಪಾಟು, ಮೈಕ್‌ ಸೆಟ್, ನೀರೆತ್ತುವ ಯಂತ್ರ, ಮೇಜು, ಕುರ್ಚಿಗಳ ಸೌಲಭ್ಯ ಒದಗಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ತಿಂಗಳಿಗೊಮ್ಮೆ ಪೂರಿ, ಜಿಲೇಬಿ, ಹೋಳಿಗೆ, ಇಡ್ಲಿ, ಲಡ್ಡು (ಯಾವುದಾದರೊಂದು) ಬಡಿಸಲಾಗುತ್ತದೆ.

‘ಈ ಬಾರಿ ಇಲ್ಲಿಯ 3 ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಶಿಕ್ಷಕರು ವಿಶೇಷ ತರಬೇತಿ ನೀಡುತ್ತಿದ್ದಾರೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಶಿವಾನಂದ ಸೋಮವ್ವಗೋಳ. ‘ಪ್ರತಿ ವರ್ಷವೂ ಈ ಶಾಲೆಯಲ್ಲಿ 15ರಿಂದ 20 ಅಂಗವಿಕಲ ಮಕ್ಕಳು ಇರುತ್ತಾರೆ. ಅವರಿಗೆ, ಸರ್ಕರದಿಂದ ಉಚಿತ ಸಾಧನಗಳು, ಆರ್ಥಿಕ ನೆರವು ಕೊಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಇಲ್ಲಿಯ ಮಕ್ಕಳು ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಲ್ಲೂ ಮುಂದಿದ್ದು, ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 5 ವರ್ಷಗಳಿಂದ ಸ್ಕೌಟ್ಸ್ ಗೈಡ್ಸ್ ಘಟಕವಿದ್ದು, ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲ ರಾಷ್ಟ್ರೀಯ ದಿನಾಚರಣೆ, ಉತ್ಸವ, ಮೆರವಣಿಗೆಗಳ ಪಥಸಂಚಲನದಲ್ಲಿ ಗಮನಸೆಳೆದಿದ್ದಾರೆ. ‘ಉತ್ತಮ ಸ್ಕೌಟ್ಸ್ ತಂಡ’ವೆಂಬ ಮನ್ನಣೆಗೂ ಭಾಜನವಾಗಿದ್ದಾರೆ.

ಚಿಣ್ಣರ ಬ್ಯಾಂಕ್:

‘ಚಿಣ್ಣರ ಬ್ಯಾಂಕ್’ ಪ್ರಾರಂಭಿಸಿ ಉಳಿತಾಯದ ಮನೋಭಾವ ಬೆಳೆಸಲಾಗುತ್ತಿದೆ. ಮಕ್ಕಳು ಪೋಷಕರಿಂದ ಪಡೆದು ತಂದ ಹಣವನ್ನು ಈ ಬ್ಯಾಂಕ್‌ಗೆ ಜಮಾ ಮಾಡುತ್ತಾರೆ. ಶಿಕ್ಷಕರು, ಆಯಾ ಮಕ್ಕಳ ಹೆಸರಲ್ಲಿ ದಾಖಲೆ ಪುಸ್ತಕ ನಿರ್ವಹಿಸಿದ್ದಾರೆ ಮತ್ತು ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದಾರೆ. ಈ ಹಣವನ್ನು ಮಕ್ಕಳ ಶೈಕ್ಷಣಿಕ ಪ್ರವಾಸದ ಖರ್ಚಿಗೆ ಬಳಸುತ್ತಿದ್ದು, ಇದರಿಂದ ಪಾಲಕರಿಗೆ ಹೊರೆಯಾಗುವುದಿಲ್ಲ’ ಎನ್ನುತ್ತಾರೆ ಶಿವಾನಂದ.

ಇಲ್ಲಿ ಓದಿದ ಮಹಮ್ಮದ್‌ ಶೇಖ್ ಸದ್ಯ ವೈದ್ಯಕೀಯ, ಕೆಲವರು ಎಂಜಿನಿಯರಿಂಗ್‌ ಮೊದಲಾದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಹಿಂದೆ ಅಲೆಮಾರಿಗಳು ನೆಲೆಸಿದ್ದ ‘ಶೇಖ್ ಮೊಹಲ್ಲಾ’ ಸಮುದಾಯಕ್ಕೆ ಈ ಶಾಲೆ ಹೊಸ ಬೆಳಕು ನೀಡಿದೆ. ಶಾಲೆ ಬೆಳವಣಿಗೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸ್ಥಳೀಯರಾದ ಲಾಲಸಾಬ ಸಿದ್ದಾಪುರ, ಮಲಿಕ ಹುಣಶ್ಯಾಳ, ಹುಸೇನಸಾಬ ಶೇಖ್, ದಾದೇಸಾಬ ಗದ್ಯಾಳ, ಮುಖ್ಯಶಿಕ್ಷಕ ಶಿವಾನಂದ ಸೋಮವ್ವಗೋಳ, ಶಿಕ್ಷಕ ಸಿದ್ದು ಗೋಕಾಕ ಮತ್ತು ಶಿಕ್ಷಕರ ಶ್ರಮವನ್ನು ಜನ ನೆನೆಯುತ್ತಾರೆ. ಸಂಪರ್ಕಕ್ಕೆ ಮೊ: 9972299275.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.