ADVERTISEMENT

ಪದವಿಯೊಂದಿಗೆ ಕೌಶಲವೂ ಅಗತ್ಯ

ರಾಣ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 12:08 IST
Last Updated 5 ಅಕ್ಟೋಬರ್ 2020, 12:08 IST
ಬೆಳಗಾವಿಯಲ್ಲಿ ಸೋಮವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ರಾಜ್ಯಪಾಲ ವಿ.ಆರ್. ವಾಲಾ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ರಾಜ್ಯಪಾಲ ವಿ.ಆರ್. ವಾಲಾ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು   

ಬೆಳಗಾವಿ: ‘ಪ್ರಸ್ತುತ ಸನ್ನಿವೇಶದಲ್ಲಿ ನಮ್ಮೆದುರುರಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪದವಿ ಜೊತೆಗೆ ಇನ್ನೂ ಹೆಚ್ಚಿನ ಜ್ಞಾನ-ಕೌಶಲ್ಯದ ಅಗತ್ಯವಾಗಿದೆ. ನವ ಪದವೀಧರರು ಇದನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಬೆಂಗಳೂರಿನ ‘ನ್ಯಾಕ್’ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಸಲಹೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದ 8ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಆನ್‌ಲೈನ್‌ನಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.

‘ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ರಾಷ್ಟ್ರೀಯವಾದ ಅಥವಾ ರಾಷ್ಟ್ರೀಯತೆಯ ಪಾತ್ರ ಪ್ರಮುಖ ಪಾತ್ರ ವಹಿಸಲಿದೆ. ನವ ಪದವೀಧರರು ದೇಶದ ಪ್ರಗತಿಯ ಚಕ್ರಗಳಿದ್ದಂತೆ. ಆದ್ದರಿಂದ ಎಲ್ಲರೂ ಭಾರತೀಯತೆ ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು’ ಎಂದು ತಿಳಿಸಿದರು.

ADVERTISEMENT

‘ಚಾಣಕ್ಯ ನೀತಿಯಲ್ಲಿ ಜ್ಞಾನವನ್ನು ಮಾತೃ ಸ್ಥಾನಕ್ಕೆ ಹೋಲಿಕೆ ಮಾಡಲಾಗಿದೆ. ಅನಾದಿ ಕಾಲದಿಂದಲೂ ಶಿಕ್ಷಣಕ್ಕೆ ನೀಡಲಾಗಿರುವ ಮಹತ್ವವನ್ನು ಇದು ತೋರಿಸುತ್ತದೆ. ಶಿಕ್ಷಣ ಹಾಗೂ ಜ್ಞಾನ ದೊಡ್ಡ ಶಕ್ತಿಯಾಗಿದೆ’ ಎಂದರು.

ಹಲವು ಯೋಜನೆ:

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ಸರ್ಕಾರವು ಇತ್ತೀಚೆಗಷ್ಟೆ ಹಿರೇಬಾಗೇವಾಡಿ ಸಮೀಪದಲ್ಲಿ 127 ಎಕರೆ ಜಾಗ ನೀಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುಕೂಲವಾಗಲಿದೆ. ವಿಶ್ವ ದರ್ಜೆಯ ವಿಶ್ವವಿದ್ಯಾಲಯ ರೂಪಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹೊಸ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ವಿಜಯಪುರದಲ್ಲಿ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗೆ 200 ಎಕರೆ ಜಮೀನು ಕೇಳಿದ್ದೇವೆ’ ಎಂದು ಹೇಳಿದರು.

ರಾಜ್ಯಪಾಲ ವಿ.ಆರ್. ವಾಲಾ ಗೌರವ ಡಾಕ್ಟರೇಟ್, ರ‍್ಯಾಂಕ್ ವಿಜೇತರಿಗೆ ಸುವರ್ಣ ಪದಕಗಳು, 79 ಮಂದಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಿದರು.

ಕ್ರೀಡಾ ಮತ್ತು ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಕೆ. ಗೋವಿಂದರಾಜ್ ಹಾಗೂ ಧಾರ್ಮಿಕ ಮತ್ತು ಸಮಾಜೋ-ಶೈಕ್ಷಣಿಕ ಕ್ಷೇತ್ರಕ್ಕಾಗಿ ಹುಬ್ಬಳ್ಳಿಯ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಮತ್ತೊಬ್ಬರಾದ ಮೋಹನದಾಸ್ ಪೈ ಗೈರು ಹಾಜರಾಗಿದ್ದರು.

ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಪರಿಚಯಿಸಿದರು. ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ ದಂಡಧಾರಿಯಾಗಿ ಘಟಿಕೋತ್ಸವ ಮೆರವಣಿಗೆಯ ನೇತೃತ್ವ ವಹಿಸಿದ್ದರು.

33,974 ಮಂದಿಗೆ ಪದವಿ:

ಘಟಿಕೋತ್ಸವದಲ್ಲಿ ಸ್ನಾತಕ ಪದವಿ ಪಡೆದ 31,262 ವಿದ್ಯಾರ್ಥಿಗಲ್ಲಿ 77 ಮಂದಿ ರ‍್ಯಾಂಕ್ ಪಡೆದಿದ್ದು, 11 ಜನರಿಗೆ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ಪದವಿ ಪಡೆದ 2,712 ವಿದ್ಯಾರ್ಥಿಗಳಲ್ಲಿ 68 ಮಂದಿ ರ‍್ಯಾಂಕ್‌ ಗಳಿಸಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣಪತ್ರ ನೀಡಲಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಯ ಒಟ್ಟು 33,974 ಮಂದಿಗೆ ಪದವಿಯನ್ನು ರಾಜ್ಯಪಾಲರು ಪ್ರಕಟಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ಆಯುಕ್ತೆ ಗೀತಾ ಬಿ.ವಿ., ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೋವಿಡ್–19 ಕಾರಣದಿಂದ ಸುರಕ್ಷತಾ ಕ್ರಮಗಳೊಂದಿಗೆ, ಸರಳವಾಗಿ ಕಾರ್ಯಕ್ರಮ ನಡೆಯಿತು. ಸಭಾಂಗಣದಲ್ಲಿ 100 ಮಂದಿಗೆ ಮಾತ್ರ ಆವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.