ADVERTISEMENT

ಭಾಗವ್ವ ಜನ್ಮ ಶತಮಾನೋತ್ಸವದಲ್ಲಿ 'ಅಜ್ಜಿಯರ ಸಮ್ಮಿಲನ'

ಕುಟುಂಬದವರಿಂದ ಸಂಭ್ರಮದ ಆಚರಣೆ

ಬಾಲಶೇಖರ ಬಂದಿ
Published 22 ನವೆಂಬರ್ 2019, 19:45 IST
Last Updated 22 ನವೆಂಬರ್ 2019, 19:45 IST
ಮೂಡಲಗಿಯಲ್ಲಿ ಶತಾಯುಷಿ ಭಾಗವ್ವ ಈರಪ್ಪನ್ನವರ ಜನ್ಮಶತಮಾನೋತ್ಸವದಲ್ಲಿ ಕುಟುಂಬದವರು ತುಲಾಭಾರ ಮಾಡಿದರು
ಮೂಡಲಗಿಯಲ್ಲಿ ಶತಾಯುಷಿ ಭಾಗವ್ವ ಈರಪ್ಪನ್ನವರ ಜನ್ಮಶತಮಾನೋತ್ಸವದಲ್ಲಿ ಕುಟುಂಬದವರು ತುಲಾಭಾರ ಮಾಡಿದರು   

ಮೂಡಲಗಿ (ಬೆಳಗಾವಿ): ನೂರು ವಸಂತಗಳನ್ನು ಕಂಡಿರುವ ಇಲ್ಲಿಯ ಭಾಗವ್ವ ಈರಪ್ಪನ್ನವರ ಅವರ ಹುಟ್ಟುಹಬ್ಬವನ್ನು ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಚೆಗೆ ವಿನೂತನವಾಗಿ ಆಚರಿಸಿದರು.

ಮೂಡಲಗಿಯ ಕೃಷಿ ಕುಟುಂಬದ ಭೀಮಪ್ಪ ಅವರನ್ನು ಮದುವೆಯಾಗಿ ಐವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಭಾಗವ್ವ ಅವರಿಗೆ ಮೊಮ್ಮಕ್ಕಳು, ಮರಿಮಕ್ಕಳು, ಗಿರಿಮೊಮ್ಮಕ್ಕಳು ಇದ್ದಾರೆ. ಎಲ್ಲರನ್ನೂ ಸೇರಿ ಕರುಳ ಬಳ್ಳಿಯ ಒಟ್ಟು ನೂರು ಕುಡಿಗಳನ್ನು ಕಂಡಿರುವ ಅಪರೂಪದ ಶತಾಯುಷಿ. 25 ಮೊಮ್ಮಕ್ಕಳು, 48 ಮರಿಮಕ್ಕಳ ಹಾಗೂ ಅವರ ಕುಟುಂಬದವರು ಹಾಗೂ ಈಚೆಗೆ ಗಿರಿಮೊಮ್ಮಗಳನ್ನು ಕಂಡಿರುವ ಸಂಭ್ರಮ ಈ ಅಜ್ಜಿಯದು. ಅವರೆಲ್ಲರು ಸೇರಿ ಅಜ್ಜಿಗೆ ಪುಷ್ಪವೃಷ್ಟಿ, ತುಲಾಭಾರ ಮಾಡಿ ನೂರನೇ ಜನ್ಮದಿನ ಆಚರಿಸಿ ಆಶೀರ್ವಾದ ಪಡೆದರು. ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಆಮಂತ್ರಿತರು ಭಾಗವಹಿಸಿದ್ದರಿಂದ ಅಜ್ಜಿಯ ನೂರರ ಸಂಭ್ರಮಕ್ಕೆ ವಿಶೇಷ ಕಳೆಕಟ್ಟಿತ್ತು.

ಆರೋಗ್ಯದ ಗುಟ್ಟು: ನೂರರ ಗಡಿ ದಾಟಿದರೂ ಬಿಪಿ, ಶುಗರ್ ಸಮಸ್ಯೆ ಇಲ್ಲ. ಹತ್ತಿರ ಬಂದವರನ್ನು ಗುರುತು ಹಿಡಿದು ವಿಚಾರಿಸುತ್ತಾರೆ. ‘ಇಷ್ಟು ದೀರ್ಘ ಆಯುಷ್ಯದಲ್ಲಿ ಬೆರಳಣಿಕೆಯಷ್ಟು ಮಾತ್ರ ಆಸ್ಪತ್ರೆಗೆ ಹೋಗಿದ್ದು ಬಿಟ್ಟರೆ ಯಾವ ಕಾಯಂ ಮಾತ್ರೆಗಳೇ ಇಲ್ಲರ್ರೀ’ ಎನ್ನುತ್ತಾರೆ ಅವರ ಹಿರಿಯ ಮಗ ಮುತ್ತಪ್ಪ ಈರಪ್ಪನವರ.

ADVERTISEMENT

‘ಅರವತ್ತು ಮೈಲು ದೂರದ ತವರಮನೆ ಯಕ್ಸಂಬಾಕ್ಕೆ ನಡಕೊಂತ ಹೋಗಿ ಬರತ್ತಿದ್ನೀರ್ರೀ, ಹೊಲದ ಕೆಲಸ, ರೆಂಟಿ, ಮಟ್ಟಿ ಹೊಡೆಯೋದು, ಬಾವಿಯಿಂದ ನೀರು ಸೇದೋದು, ಒಡ್ಡ ಹಾಕೋದು, ಬೀಸೋದು, ಕುಟ್ಟೋದೆಲ್ಲ ಮಾಡೇನ್ರೀ' ಎಂದು ಅಜ್ಜಿ ತಮ್ಮ ಬಡತನ ಮತ್ತು ಕಷ್ಟದ ಜೀವನವನ್ನು ನೆನೆಸಿಕೊಂಡರು.

‘ಈಗಲೂ ಕಾಳಖಡಿ ಹಸನ ಮಾಡತ್ತೀನ್ರೀ. ಕಸ ಹೊಡಿತ್ತೀನ್ರೀಖಾಲಿ. ಕೂಡ್ರಾಕ ಆಗಾಂಗಿಲ್ಲರ್ರೀ’ ಎಂದು ಕಾಯಕವೇ ಆರೋಗ್ಯದ ಗುಟ್ಟು ಎಂದು ತಿಳಿಸಿದರು.

‘ನೂರು ವಯಸ್ಸು ದಾಟಿದ ಭಾಗವ್ವ ಅಜ್ಜಿದು ಭಾಗ್ಯ. ಇನ್ನಮುಂದ ಅವರು ಬರೀ ಅಜ್ಜಿ ಆಗಿ ಕಾಣೋದಿಲ್ಲ, ದೇವರಾಗಿ ಕಾಣತ್ತಾರೆ’ ಎಂದು ಸಾನ್ನಿಧ್ಯ ವಹಿಸಿದ್ದ ಶ್ರೀಪಾದಬೋಧ ಸ್ವಾಮೀಜಿ, ಕನ್ಹೇರಿಮಠ ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮೀಜಿ ತಮ್ಮ ಮಾತಿನಲ್ಲಿ ಹೇಳಿದರು. ‘ಇದು ಕಾರ್ಯಕ್ರಮ ಅನ್ನೋದಕಿಂತ ಪ್ರತಿಯೊಬ್ಬರು ತಾಯಿಯನ್ನು ಪೂಜಿಸಬೇಕು ಎನ್ನುವ ಸಂದೇಶ ಸಮಾಜಕ್ಕೆ ನೀಡಿದಂತೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.