ಬೆಳಗಾವಿ: ‘1995ರ ನಂತರದ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆದಿದೆ. ಹಣಕಾಸು ಇಲಾಖೆಗೂ ಪ್ರಸ್ತಾವ ಸಲ್ಲಿಸಿದ್ದೇವೆ. ಕನ್ನಡ ಶಾಲೆ ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಹಿಂದೆ 1995ರಿಂದ 2016ರವರೆಗಿನ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂಬ ಪ್ರಸ್ತಾವ ಇತ್ತು. ನಾವು 2020ರವರೆಗಿನ ಶಾಲೆಗಳನ್ನೂ ಪರಿಗಣಿಸಲು ಉದ್ದೇಶಿಸಿದ್ದೇವೆ. ಮುಂದಿನ ವರ್ಷಕ್ಕೆ ಸಾಧ್ಯವಾಗಬಹುದು’ ಎಂದೂ ಭರವಸೆ ನೀಡಿದರು.
‘ಸುಮಾರು 600ಕ್ಕೂ ಹೆಚ್ಚು ಕನ್ನಡ ಶಾಲೆಗಳು ಅನುದಾನ ರಹಿತವಾಗಿ ನಡೆಯುತ್ತಿವೆ ಎಂದು ಮನವಿ ಕೊಟ್ಟಿದ್ದಾರೆ. ಇದಕ್ಕೂ ಹೆಚ್ಚು ಇರಬಹುದು. ಈ ಸಂಸ್ಥೆಗಳಿಗೆ ಅನುದಾನ ಕೊಡಲೇಬೇಕು ಎಂದು ಯಾರೂ ನಿಯಮ ಮಾಡಿಲ್ಲ. ಅದಾಗಿಯೂ ಸರ್ಕಾರ ಸಹಾನುಭೂತಿಯಿಂದ ಪರಿಗಣನೆ ಮಾಡುತ್ತದೆ. ಅನುದಾನಕ್ಕೆ ಹಣಕಾಸಿನ ಸಮಸ್ಯೆ ಏನೂ ಇಲ್ಲ’ ಎಂದೂ ಅವರು ಹೇಳಿದರು.
‘ರಾಜ್ಯದಲ್ಲಿ ಮೊದಲ ಹಂತದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ₹2,500 ಕೋಟಿ ಅನುದಾನ ಅಗತ್ಯ. ಈ ಸಂಬಂಧ ಎಡಿಬಿ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.
‘ಚುನಾವಣೆಯೂ ಸೇರಿದಂತೆ ಬೇರೆ ಯಾವುದೇ ಚಟುವಟಿಕೆಗೆ ಸರ್ಕಾರಿ ಶಾಲೆ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿದ್ದೇನೆ. ಶಿಕ್ಷಕರು ಶಾಲೆಯಲ್ಲೇ ಹೆಚ್ಚು ಚಟುವಟಿಕೆ ಆರಂಭಿಸಲು ಅನುಕೂಲ ಮಾಡಿಕೊಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದ್ವಿಭಾಷಾ ನೀತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ನಾನೊಬ್ಬನೇ ತೀರ್ಮಾಣ ಮಾಡುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಏನು ಬೇಕೋ ಅದನ್ನು ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.