ADVERTISEMENT

ಗೃಹಲಕ್ಷ್ಮಿ: ಮಾರ್ಚ್‌ 31ರ ನಂತರ ಎರಡು ಕಂತಿನ ಹಣ ಬಿಡುಗಡೆ; ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 7:46 IST
Last Updated 23 ಮಾರ್ಚ್ 2025, 7:46 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಮಾರ್ಚ್‌ 31ರ ನಂತರ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹2 ಸಾವಿರ ಹೆಚ್ಚಿಸಿದ್ದೆವು. ಅದಾದ ನಂತರಯಾವುದೇ ಸರ್ಕಾರಗಳೂ ಹೆಚ್ಚಿಸಲಿಲ್ಲ. ಈ ಬಜೆಟ್‌ನಲ್ಲಿ ಕಾರ್ಯಕರ್ತೆಯರ ಗೌರವಧನವನ್ನು ₹1,000, ಸಹಾಯಕಿಯರ ಗೌರವಧನವನ್ನು ₹750 ಹೆಚ್ಚಿಸಿ ಘೋಷಿಸಿದ್ದೇವೆ. ಅದನ್ನು ಜಾರಿಗೆ ತರುತ್ತೇವೆ’ ಎಂದರು.

ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಿರುವ ವಿಚಾರವಾಗಿ ‍ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿರುವುದು ದುರದೃಷ್ಟಕರ ಸಂಗತಿ. ಈ ಬಗ್ಗೆ ರಾಜಣ್ಣ ಅವರು ತಮಗಾದ ಅನುಭವವನ್ನು ಸದನದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಈಗಾಗಲೇ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಸಚಿವರು ಆ ವಿಷಯ ನೋಡಿಕೊಳ್ಳುತ್ತಾರೆ. ಆ ಬಗ್ಗೆ ಹೆಚ್ಚು ಮಾತನಾಡಲ್ಲ’ ಎಂದರು.

ADVERTISEMENT

‘ಘರ್ಜಿಸುವ ಹುಲಿಗಳನ್ನೇ ಈಗ ಟಾರ್ಗೆಟ್‌ ಮಾಡಿ ಹೆದರಿಸಲಾಗುತ್ತಿದೆ’ ಎಂಬ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿಕೆಗೆ, ‘ಈ ಬಗ್ಗೆ ಸತೀಶ ಅವರನ್ನೇ ಕೇಳಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.